ಸ್ಟೇಟಸ್ ಕತೆಗಳು (ಭಾಗ ೨೩೨) - ಗೌರವ

ಶಾಲೆಯ ಎದುರಿನ ರಸ್ತೆಯ ತುಂಬೆಲ್ಲಾ ಅದೇ ಶಾಲೆಯ ಸಮವಸ್ತ್ರಗಳು ಸಂಭ್ರಮದಿಂದ ನಡೆದುಬರುತ್ತಿದೆ. ಸಮವಸ್ತ್ರದ ಸಮಾನತೆಯ ನೋಡುವಾಗ ಮತ್ತೆ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತಿದೆ. ಪ್ರಾರ್ಥನೆಯ ಗಂಟೆ ಮೊಳಗಿತು, ನಾಡಗೀತೆ ದೇವರ ಹಾಡು ರಾಷ್ಟ್ರಗೀತೆಯೊಂದಿಗೆ ದಿನವು ಮುಕ್ತಾಯವಾಗುವುದು. ಇಂದು ಕೂಡಾ ದಿನದಂತೆ ಆರಂಭವಾಯಿತು. ಎಲ್ಲಾ ಕಡೆ ಗೌರವ ವಂದನೆ ಪ್ರಾರ್ಥನೆಗೆ ದಕ್ಕಿತ್ತು. ಅವನೊಬ್ಬನದು ಮುದಿ ವಯಸ್ಸು. ಆತ ನಿಂತಿದ್ದಾನೆ. ದಿನವೂ ಅದೇ ದಾರಿಯಲ್ಲಿ ಇದೇ ಸಮಯಕ್ಕೆ ಹೋಗುವುದಾದರೆ ಅಲ್ಲಿ ನಿಂತು ಪ್ರಾರ್ಥನೆ ಮುಗಿದ ನಂತರ ಹೊರಡುತ್ತಾನೆ. ಆತನನ್ನು ಗಮನಿಸಿದಾಗ ಶಾಲಾ ಶಿಕ್ಷಣದ ಯಾವುದೇ ಕುರುಹುಗಳು ಆತನನ್ನೇ ಕಾಣುತ್ತಿಲ್ಲ. ಬದುಕು ಅದ್ಭುತವಾದದ್ದನ್ನು ತಿಳಿಸಿ ಕೊಟ್ಟಿರುವುದನ್ನು ಮುಖದ ನೆರಿಗೆಗಳು, ಬಿಳಿ ಬಣ್ಣಕ್ಕೆ ತಿರುಗಿದ ಕೂದಲುಗಳು ತಿಳಿಸುತ್ತಿವೆ. ಅದೇ ಪ್ರಾರ್ಥನೆಯ ಸಮಯದಲ್ಲಿ ಅದೇ ಶಾಲೆಯಲ್ಲಿ ಓದಿ ಕೆಲಸ ಪಡೆದು ಒಂದಷ್ಟು ಸಂಪಾದಿಸುತ್ತ ಬದುಕು ಸಾಗಿಸುತ್ತಿರುವ ಯುವಕ ಪ್ರಾರ್ಥನೆಯ ಸಮಯದಲ್ಲಿ ಅಲ್ಲೇ ಚಲಿಸಿದರು ಒಂದು ದಿನವೂ ನಿಂತಿಲ್ಲ. ಆತನಿಗೆ ಪ್ರಾರ್ಥನೆ ಕಿವಿಗೆ ಕೇಳಿದೆ ಹೊರತು ಮನಸ್ಸಿಗಲ್ಲ. ಕೆಲಸಕ್ಕಿಂತ ಪ್ರಾರ್ಥನೆ ಮುಖ್ಯ ಅಲ್ಲ ಅನ್ನಿಸಿದೆ. ಅದೇ ದಾರಿಯಲ್ಲಿ ಸಾಗುವ ಶಾಲೆಯ ಮುಖ ಕಂಡಿರುವ ಹಲವು ಯುವ ಮನಸ್ಸುಗಳಿಗೆ ಪ್ರಾರ್ಥನೆಯ ಗೌರವಿಸಬೇಕು ಅನ್ನಿಸಿಲ್ಲ. ಹಾಗಾಗಿ ನನ್ನಲ್ಲಿ ಪ್ರಶ್ನೆಗಳು ಮೂಡಿದ್ದು "ಶಿಕ್ಷಣ ಕಲಿಸಬೇಕಾಗಿರೋದು ಏನನ್ನು? ನಿಜವಾದ ಶಿಕ್ಷಣ ಇವರಿಬ್ಬರಲ್ಲಿ ಯಾರದ್ದು ? ನಿಮ್ಮ ಪ್ರಕಾರ...?”
-ಧೀರಜ್ ಬೆಳ್ಳಾರೆ
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ