ಸ್ಟೇಟಸ್ ಕತೆಗಳು (ಭಾಗ ೨೪೫) - ಭಯ
ಪ್ರತಿಯೊಂದು ಸ್ಥಳ, ಪ್ರತಿಯೊಂದು ಶಬ್ದ , ಪ್ರತಿಯೊಂದು ವಸ್ತುವೂ ಹೊಸ ತರವಾದ ಭಿನ್ನವಾದ ಭಾವನೆಯನ್ನು ಹುಟ್ಟಿಸುತ್ತದೆ. ಇದರಲ್ಲಿ ಶಶಿಕಾಂತನಿಗೆ ವಿಪರೀತವಾಗಿ ಎದೆ ನಡುಗಿ, ದೇಹ ಬೆವರಿ ಭಯವನ್ನುಂಟು ಮಾಡಿಸುವುದೇ ಆಂಬುಲೆನ್ಸ್ ಶಬ್ದ. ಯಾಕೆ ಅಂತ ಕೇಳಿದರೆ, ಸ್ಮೃತಿ ಪಟಲದ ಹಿಂದಿನ ಆಲೋಚನೆಗಳನ್ನು ಕೆದಕಿ ಮುಂದಿಡುತ್ತಾನೆ. ಅವತ್ತು ಆಡೋಕೆ ಹೊರಟ್ಟಿದ್ದೆವು. ಇನ್ನೇನು ಮೈದಾನ ತಲುಪಬೇಕೆನ್ನುವಷ್ಟರಲ್ಲಿ ನಾಯಿ ಅಡ್ಡ ಬಂದಕಾರಣ ನಾವಿಬ್ರೂ ಕೆಳಗೆ ಬಿದ್ವಿ. ನನಗಷ್ಟೇನು ಗಾಯವಾಗಿಲ್ಲವಾದರೂ ಗೆಳೆಯನಿಗೆ ಗಂಭೀರ ಗಾಯಗಳಾಗಿ ರಕ್ತ ಹರಿಯೋಕೆ ಆರಂಭವಾಯಿತು. ಆಂಬುಲೆನ್ಸ್ ಗೆ ಕರೆ ಮಾಡಿ ಅದರಲ್ಲಿ ಏರಿಸಿಕೊಂಡು ಹೊರಟೆ. ಆಸ್ಪತ್ರೆ ಇನ್ನೇನು ತಲುಪುತ್ತಿದೆ ಎನ್ನುವಾಗ ಆತನ ನೋವು, ಯಾತನೆ, ಕೊನೆ ಕ್ಷಣದ ಹೋರಾಟ ಕಣ್ಣಮುಂದೆ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಅ ಭಯ ಇನ್ನು ಹೋಗಲಿಲ್ಲ. ಗೆಳೆಯನನ್ನ ಬದುಕಿಸಿಕೊಳ್ಳಲು ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಎಲ್ಲಿ ಆಂಬುಲೆನ್ಸ್ ಶಬ್ದ ಕೇಳಿದಾಗ ತನ್ನ ಗೆಳೆಯ ಮತ್ತೊಮ್ಮೆ ಎದೆಯ ಬಾಗಿಲನು ಬಡಿಯುತ್ತಾನೆ. ಯಾರದೋ ಎದೆಯ ಉಸಿರು ನಿಂತಿರುವ ಯೋಚನೆ ಕೂಡ ಜೊತೆಗೆ ಬಂದು ಹೊರಟುಹೋಗುತ್ತದೆ. ಮತ್ತೆ ಮತ್ತೆ ಯೋಚಿಸುತ್ತಾನೆ ನನ್ನ ಗೆಳೆಯನಿಗೆ ಸಿಕ್ಕ ಅಂತ್ಯ ಯಾರಿಗೂ ಸಿಗೋದು ಬೇಡ. ಜೀವ ಉಳಿಯಲಿ, ಉಸಿರು ಹೆಚ್ಚಾಗಲಿ, ಬದುಕುವ ಕನಸಿಗೆ ರೆಕ್ಕೆ ಹುಟ್ಟಿ ನನಸಾಗಲಿ. ಜೀವ ಅಮೃತವನ್ನು ಪಡೆಯಲಿ. ಮತ್ತೆ ಯೋಚಿಸಿದ ಶಶಿಕಾಂತ, ಇನ್ನೊಂದು ಆಂಬುಲೆನ್ಸ್ ಶಬ್ದ ಕೇಳಿತು ಕೈಮುಗಿದು ನಿಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ