ಸ್ಟೇಟಸ್ ಕತೆಗಳು (ಭಾಗ ೨೪೬) - ಪ್ರಶ್ನೆ
ಹೀಗೆ ಯಾಕಾಗುತ್ತಿದೆ ಗೊತ್ತಾಗುತ್ತಿಲ್ಲ. ನಾನು ನೀರಿನಂತ ಆಗುತ್ತಿದ್ದೇನೆ ಅನ್ನುವ ಸಂಶಯ ಕಾಡುತ್ತಿದೆ. ಏಕೆಂದರೆ ನಿಮ್ಮ ಬಳಿ ಇರುವ ಒಂದಷ್ಟು ನೀರನ್ನು ಬಟ್ಟಲಿಗೆ ಹಾಕಿದರೆ ಅದಕ್ಕೆ ಒಗ್ಗಿಕೊಳ್ಳುತ್ತದೆ, ದೊಡ್ಡ ಹಂಡೆಗೆ ಹಾಕಿದರೆ ಅದರ ಆಕಾರಕ್ಕೆ ಒಗ್ಗಿಕೊಳ್ಳುತ್ತದೆ, ಬಿಸಿ ಮಾಡಿದರೆ ಬಿಸಿಯಾಗುತ್ತದೆ, ಕಾಯಿಸಿದರೆ ತಣ್ಣಗಾಗುತ್ತದೆ, ತಂಪಾಗಿಸಿದರೆ ಘನವಾಗುತ್ತದೆ. ಆಕಾರಗಳು ಬದಲಾದರೂ ಆ ಆಕಾರವನ್ನು ತನ್ನದಾಗಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ನೀರು ನೀರಾಗಿರುತ್ತದೆ. ಹಾಗೆಯೇ ನಾನು ಕೂಡ, ಯಾರೇನೇ ಅಂದರು ಅವರ ಆಲೋಚನೆಯ ಒಳಗಿಳಿದು ಕೆಲಸವನ್ನು ಮಾಡುತ್ತೇನೆ. ಅದರಿಂದ ಅವರಿಗೆ ಒಳಿತನ್ನೇ ಬಯಸುತ್ತೇನೆ. ನನಗೆ ಕೊಟ್ಟ ರೂಪಕ್ಕೆ ಹೊಂದಿಕೊಳ್ಳುತ್ತೇನೆ. ಖಾಲಿಯಾಗಿದ್ದ ಆಕಾರಗಳನ್ನು ತುಂಬಿಸುತ್ತೇನೆ. ಹೀಗೆ ಮೂಲದಲ್ಲಿ ನಾನಾಗಿದ್ದರೂ ಅವರೊಳಗೆ ಒಬ್ಬನಾಗಿ ಅವರಂತಾಗಲು ಪ್ರಯತ್ನಿಸುತ್ತೇನೆ. ಇದಿಷ್ಟೂ ನನ್ನ ಸಂಶಯ. ನನ್ನ ಪ್ರಶ್ನೆ ಏನೆಂದರೆ ನಾನು ಹೀಗಿರುವುದು ಸರಿಯಾ ಅಥವಾ ಕೆಲವೊಂದು ಕ್ಷಣದಲ್ಲಿ ನಾನು ಆ ಕೆಲಸಗಳಿಗೆ ಅವರೊಂದಿಗೆ ಒಗ್ಗಿಕೊಂಡು? ಇನ್ನೊಂದಷ್ಟು ಸಮಯದಲ್ಲಿ ನನ್ನ ರೂಪಕ್ಕೆ ಅವರನ್ನು ಒಗ್ಗಿಸಿಕೊಳ್ಳುವುದು? ಸರಿಯಾದ ಮಾರ್ಗವು ಯಾವುದೆಂದು ತಿಳಿಯದೆ ಪ್ರಶ್ನೆಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ನನ್ನ ಬದುಕಿಗೆ ಉತ್ತರದ ಅವಶ್ಯಕತೆ ಇದೆ. ನೀವು ತಿಳಿಸುತ್ತೀರಿ ಎಂದು ನಂಬಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ