ಸ್ಟೇಟಸ್ ಕತೆಗಳು (ಭಾಗ ೨೪೭) - ಕ್ಯಾಬೇಜ್
ಹಬ್ಬದ ಕಾರಣಕ್ಕೆ ಮನೆಯಲ್ಲಿ ಜೊತೆಯಾಗಿದ್ದೆವು. ಅನ್ನ ಸಂತರ್ಪಣೆಗೆ ಕ್ಯಾಬೇಜ್ ಕತ್ತರಿಸುತ್ತಾ ಇದ್ದೆ. ಕ್ಯಾಬೇಜ್ ನ ಪ್ರತಿಯೊಂದು ಎಲೆಗಳನ್ನು ತೆಗೆಯುತ್ತಾ ಹೋದಹಾಗೆ ಅದೊಂದು ಕಥೆಯನ್ನ ಹೇಳಲಾರಂಭಿಸಿತು.
"ನಾನು ಪ್ರತಿಯೊಂದು ಎಲೆಯನ್ನು ತೆಗೆದ ಹಾಗೆ ಹೊಸಬನಾಗುತ್ತೇನೆ. ಆದರೆ ನನ್ನನ್ನು ನಾನು ಕಳೆದುಕೊಳ್ಳುತ್ತಾ ಇರುತ್ತೇನೆ. ಕೊನೆಗೆ ನಾನು ಯಾರು ಅನ್ನುವ ಕುರುಹು ಕೂಡಾ ಉಳಿಯುವುದಿಲ್ಲ. ಏನು ಇಲ್ಲದವ ಆಗ್ತೇನೆ. ಆಗ ನೀನು ಕಿತ್ತೆಸೆದ ಎಲೆಗಳನ್ನು ಮತ್ತೆ ಹುಡುಕಿ ತರಲಾಗುವುದಿಲ್ಲ. ಹಾಗೆಯೇ ನಿನ್ನ ಸುತ್ತಮುತ್ತ ಇದೀಗ ತಾನೆ ಬೆಳೆಯುತ್ತಿರುವ ಸಂಬಂಧಗಳನ್ನು ಹಾಗೆಯೇ ಬಿಗಿಗೊಳಿಸಿಕೊಂಡು ಗಟ್ಟಿಯಾಗಿ ಬಲಿಷ್ಠವಾಗಲು ಪ್ರಯತ್ನಿಸು. ನನಗೆ ಸಂಬಂಧಗಳ ಅವಶ್ಯಕತೆ ಇಲ್ಲ, ನಾನೊಬ್ಬನೇ ಬದುಕುತ್ತೇನೆ ಅನ್ನೋದು ಸದ್ಯದ ಬಿಸಿರಕ್ತ ನಿನ್ನ ಮಾತನಾಡಿಸ ಬಹುದು. ಆದರೆ ಭವಿಷ್ಯದಲ್ಲಿ ಸಂಬಂಧಗಳನ್ನು ಕಳಚುತ್ತಾ ಕಳುಹಿಸುತ್ತಾ ನೀನು ಚಲಿಸಿದ ಹಾಗೆ ಮುಂದೊಂದು ದಿನ ಏಕಾಂಗಿಯಾಗಿ ಉಳಿಯುತ್ತೀಯ. ಹಾಗೇ ಹೊರಟು ಹೋಗುತ್ತೀಯ. ಕೊನೆಗೆ ಹೆಗಲು ಕೊಡುವುದಕ್ಕಾದರೂ ನಾಲ್ಕು ಜನ ಕೂಡ ಸಿಗದಿರುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಹಾಗಿರುವಾಗ ಕಳೆದುಕೊಳ್ಳುವುದು ತಪ್ಪಲ್ವಾ? ಕೆಲವೊಂದು ಸಲ ವ್ಯಕ್ತಿಯಿಂದ ಪರಿಸ್ಥಿತಿಗೆ ಅನುಗುಣವಾಗಿ ತಪ್ಪಾಗಿರುತ್ತದೆ. ಹಾಗಿರುವಾಗ ವ್ಯಕ್ತಿಯೇ ತಪ್ಪು ಅಂತಲ್ಲ, ಮತ್ತೆ ನಾನೇನು ಹೇಳಲಿ. ನಾನು ಹೇಳುವುದಿಷ್ಟೇ ಸಂಬಂಧಗಳು ಅನ್ನುವ ಪರದೆಗಳನ್ನು ಗಟ್ಟಿಯಾಗಿ ಬಿಗಿಗೊಳಿಸಿ ಇನ್ನಷ್ಟು ಗಟ್ಟಿಯಾಗಿ ನಿಂತು ಬಿಡು ಬದುಕು ಸುಂದರವಾಗಿರುತ್ತೆ".
ಕ್ಯಾಬೇಜು ತುಂಡಾಗಿತ್ತು, ದೊಡ್ಡ ಬಾಣಲೆಯಲ್ಲಿ ಯಾರದ್ದೋ ಹೊಟ್ಟೆ ತುಂಬಲು ಪಲ್ಯಕ್ಕಾಗಿ ತನ್ನನ್ನು ತಾನು ಬೇಯಿಸಿಕೊಳ್ಳುತ್ತಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ