ಸ್ಟೇಟಸ್ ಕತೆಗಳು (ಭಾಗ ೨೫೦) - ಸುದ್ದಿ
ಆ ಮನೆಯ ಸುತ್ತ ಮುಖ ಒಂದು ತಿಂಗಳಿನಿಂದ ಹಾವೊಂದು ಸುಳಿದಾಡುತ್ತಿದೆ ಅನ್ನುವ ಸುದ್ದಿ ಊರಲ್ಲೆಲ್ಲ ಹಬ್ಬಿದೆ. ಕಾರಣ ಯಾರಿಗೂ ಗೊತ್ತಿಲ್ಲ. ಗಾಳಿಮಾತು ಒಂದು ಹೊಸ ರೂಪ ಪಡೆದುಕೊಂಡಿದ್ದು "ಹಿಂದೊಮ್ಮೆ ಮನೆಯವರು ಯಾವುದೋ ಹಾವನ್ನು ಸಂಹಾರ ಮಾಡಿ ಅದಕ್ಕೆ ಪ್ರಾಯಶ್ಚಿತ ಮಾಡಿರಲಿಲ್ಲವಂತೆ ಅದಕ್ಕಾಗಿ ಮನೆಯ ಸುತ್ತಮುತ್ತ ತಪ್ಪು ದಂಡವನ್ನು ಕೇಳುವುದಕ್ಕೆ ಹಾವು ಸುತ್ತಾಡುತ್ತಿದೆ ಅನ್ನೋದು ಊರವರ ಬಾಯಿಮಾತು. ಅವತ್ತು ಬೆಳಗ್ಗೆ ಜನ ಮನೆಗೆ ಧಾವಿಸುತ್ತಿದ್ದಾರೆ. ನೋವಿನ ಛಾಯೆ ಮನೆಯಲ್ಲಿ ತುಂಬಿದೆ. ಮನೆಯ ಮಗಳು ಬಾಯಲ್ಲಿ ನೊರೆ ಕಾರಿಕೊಂಡು ಪ್ರಾಣ ಬಿಟ್ಟಿದ್ದಾಳೆ. ದೇಹ ಬಣ್ಣಬದಲಾಯಿಸಿದೆ. ಮಾತುಗಳು ಹೊಸ ಸ್ವರೂಪದ ಕಡೆಗೆ ತಿರುಗಿದವು .ಮೊದಲು ನಾಗದೋಷಕ್ಕೆ ಪರಿಹಾರವಾಗಬೇಕು.
ಇಲ್ಲದಿದ್ದರೆ ಇನ್ನೆಷ್ಟು ಪ್ರಾಣ ಹೋಗಲಿದೆಯೋ ಗೊತ್ತಿಲ್ಲ .ಹಾಗಾಗಿ ಮರುದಿನ ದೇವಸ್ಥಾನಕ್ಕೆ ಹೊರಡುವುದಕ್ಕೆ ನಿರ್ಧಾರವಾಯಿತು. ಇನ್ನೊಂದು ಕಡೆ ಹಾವಿನ ಹುಡುಕಾಟಕ್ಕೆ ಉರಗ ತಜ್ಞರಿಗೆ ಕರೆ ಹೋಯಿತು. ಇಲ್ಲಿ ಸದ್ದಾಗದ ಸುದ್ದಿಯೊಂದು ವಿಷವನ್ನು ತನ್ನೊಳಗೆ ಇಟ್ಟುಕೊಂಡು ಮರಣಿಸಿದೆ. ಪ್ರೀತಿಯನ್ನು ಹೇಳೋಕೆ ಆಗದೆ ಆಕೆ ವಿಷ ಕುಡಿದಿದ್ದಳು ಸಾವಿನ ಶಾಪ ಹಾವಿಗೆ ಸುತ್ತಿಕೊಂಡಿತ್ತು. ಈ ಸುದ್ದಿ ಯಾವ ಹೊಸಿಲನ್ನು ದಾಟಲಿಲ್ಲ. ಆ ದಿನದಿಂದ ಹಾವು ಕಾಣಿಸಿಕೊಂಡಿಲ್ಲ. ಊರವರು ದೋಷ ಪರಿಹಾರವಾಯಿತು ಎಂದುಕೊಂಡರು. ಪಕ್ಕದ ಮನೆಯಲ್ಲಿ ಕಾವು ಇಟ್ಟಿದ್ದ ಕೋಳಿಯ ಮೊಟ್ಟೆ ಖಾಲಿಯಾದದ್ದು ಯಾರ ಗಮನಕ್ಕೂ ಬರಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ