ಸ್ಟೇಟಸ್ ಕತೆಗಳು (ಭಾಗ ೨೭೫) - ಮಸುಕು

ಸ್ಟೇಟಸ್ ಕತೆಗಳು (ಭಾಗ ೨೭೫) - ಮಸುಕು

ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ. ರಸ್ತೆ ದಾಟಲು ಕಾಯಬೇಕಿತ್ತು. ಗಾಡಿಗಳು ಮನೆಗೆ ಹೊರಡುವ ಸಮಯ. ಓಟಕ್ಕೆ ನಿಂತಂತೆ ಒಂದರ ಹಿಂದೆ ಒಂದರಂತೆ ಒಂದು ಓಡುತ್ತಲಿದ್ದವು. ಸುತ್ತ ಕಣ್ಣಾಡಿಸಿದಾಗ ದೂರದಿಂದ ಗಾಡಿಗಳ ಬೆಳಕು ಮಸುಕು ಮಸುಕಾಗಿ ಕಾಣಲಾರಂಭಿಸಿತು. ಅದೇ ಬೆಳಕು ರಸ್ತೆಯಲ್ಲಿ ಚಲಿಸಿ ಮಾಯವಾದರೂ ಕೂಡ ಮುಸುಕು ಸರಿಯಲಿಲ್ಲ. ಹಾಗಾಗಿ ಒಂದು ಸಲ ಹೆದರಿಕೆ ಆಯಿತು ಕಣ್ಣುಜ್ಜಿಕೊಂಡು ಮತ್ತೆ ಗಮನಿಸಿದೆ. ಕಾಣುತ್ತಿಲ್ಲ ಗಾಡಿಯ ಸಂಖ್ಯೆಗಳು, ಹೆಸರು. ಎಲ್ಲವೂ ಬರಿ ಮಸುಕು. ಹಾಗಾಗಿ ಒಂದು ಕ್ಷಣ ಅಲ್ಲೇ ಪಕ್ಕದ ಕಲ್ಲು ಬೆಂಚಿನಲ್ಲಿ ಕುಳಿತು ಸ್ವಲ್ಪ ನೀರು ಕುಡಿದು ಮುಖಕ್ಕೆ ನೀರು ಸಿಂಪಡಿಸಿ ದೀರ್ಘವಾಗಿ ಉಸಿರೆಳೆದುಕೊಂಡು ಮತ್ತೆ ರಸ್ತೆಯನ್ನು ನೋಡಿದೆ. ಮಸುಕಾದ ಬೆಳಕು ಕೆಲಕ್ಷಣಗಳಲ್ಲಿ ಸ್ಪಷ್ಟವಾಯಿತು. ಸ್ಪಷ್ಟತೆಯಿಂದಲೇ ಕಣ್ಣ ಮುಂದೆ ಹಾದು ಹೋಯಿತು. ಹಾಗಾಗಿ ಮಸುಕುತನ ಮಾಯವಾಗಲು ಮೆದುಳಿಗೆ ಚೂರು ವಿಶ್ರಾಂತಿ, ಮನಸ್ಸಿಗೊಂದಿಷ್ಟು ಉಲ್ಲಾಸ ಬೇಕಿತ್ತು. ಆಗ ಬ್ಯಾಗಿನೊಳಗಿದ್ದ ಫೈಲಿನ ಸಮಸ್ಯೆಗೂ ಪರಿಹಾರ ಹೊಳೆಯಿತು. ಮಾಡಬೇಕಾದದ್ದು ಇಷ್ಟೇ. ಸಾವಧಾನದಿಂದ ಯೋಚಿಸಿ ಮನಸ್ಸಿಗೊಂದಿಷ್ಟು ವಿಶ್ರಾಂತಿ ನೀಡಿ ಪರಿಹಾರ ಚಿಂತಿಸಬೇಕಿತ್ತು. ಪ್ರತಿಯೊಂದಕ್ಕೂ ಪರಿಹಾರವಿದೆ ಕೆಲವನ್ನು ಸಮಯ ನಿರ್ಧರಿಸಿದರೆ ಕೆಲವನ್ನು ಮನಸ್ಥಿತಿ ನಿರ್ಧರಿಸುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ