ಸ್ಟೇಟಸ್ ಕತೆಗಳು (ಭಾಗ ೨೭೮) - ಮುಚ್ಚಿದ ಬಾಗಿಲು
ಪ್ರತಿಯೊಂದು ಮುಚ್ಚಿದ ಬಾಗಿಲಿನ ಹಿಂದೆ ಒಂದೊಂದು ಕತೆ ಇರುತ್ತದೆ. ಬಾಗಿಲು ತೆರೆದಿದ್ದರೆ ಕುತೂಹಲ ಕಡಿಮೆ, ಮುಚ್ಚಿದ್ದಷ್ಟು ಆಸಕ್ತಿ ಹೆಚ್ಚು. ಅವತ್ತು ದಾರೀಲಿ ಸಾಗುತ್ತಿರುವಾಗ ಆ ತಿರುವಿನಲ್ಲಿ ಆ ಅಂಗಡಿಯ ಬಾಗಲು ಮುಚ್ಚಿತ್ತು. ಆ ಅಂಗಡಿ ಪ್ರತಿದಿನ ಸಂಜೆ ಆರಕ್ಕೆ ತೆರೆದು ರಾತ್ರಿ ಹನ್ನೊಂದರವರೆಗೂ ಜನರನ್ನು ಕರೆಯುತ್ತದೆ. ಇಲ್ಲಿ ಮೊಟ್ಟೆ ಬೇಯುತ್ತದೆ, ಆಮ್ಲೆಟ್ ನ ಪರಿಮಳ ಹೆಚ್ಚುತ್ತದೆ.
ಒಂದು ವಾರದಿಂದ ಮುಚ್ಚಿದ ಬಾಗಿಲು ತೆರೆದಿಲ್ಲ . ಬಾಗಿಲಿನ ಹಿಂದಿನ ಕಥೆ ಕೇಳೋಣ ಅಂತ ಅಂದ್ರೆ ಪರಿಚಯದವರು ಯಾರು ಇಲ್ಲ. ಹಾಗಾಗಿ ನಾನೇ ಕಥೆಯೊಂದನ್ನು ಸೃಷ್ಟಿಸಿದೆ. ಯಾಕಂದ್ರೆ ಹಿಂದಿನ ಎರಡು ಸಲ ಅಲ್ಲಿ ಹೋದಾಗ ಅಂಗಡಿ ಯಜಮಾನ ತನ್ನ ಹೆಂಡತಿಯ ಜೊತೆ ಮಾತನಾಡುತ್ತಿದ್ದದ್ದು ಕಿವಿಗೆ ಬಿದ್ದಿತ್ತು. "ನಿನಗೆ ಎಷ್ಟು ಸಲ ಹೇಳೋದು ಅಂಗಡಿ ಕಡೆ ಬರಬೇಡ, ಮನೆಯಲ್ಲಿರು ಅಂತ. ಮೊದಲೇ ನಿನಗೆ ಉಸಿರಾಟದ ಸಮಸ್ಯೆ ಬೇರೆ"
"ಹೌದು ಹೌದು ನಾನು ಮನೆಯಲ್ಲಿ ಕುಳಿತರೆ ನಿಮಗೆ ಸಹಾಯ ಮಾಡೋಕೆ ಯಾರಿದ್ದಾರೆ. ನೀವೊಬ್ಬರೇ ರಾತ್ರಿವರೆಗೂ ದುಡಿಯುತ್ತೀರಿ ಅಲ್ವಾ? ತೊಂದರೆ ಇಲ್ಲ ನಾನು ಬರುತ್ತೇನೆ"
"ಸರಿ ಮಾರಾಯ್ತಿ, ಮುಂದಿನ ವಾರ ನಾವಿರುವ ಬಾಡಿಗೆ ಮನೆ ಬಿಡಬೇಕಂತೆ ನಿನ್ನೆ ಓನರ್ ಹೇಳಿದ್ರು"
"ಸರಿ ಎಲ್ಲಿಗಾದರೂ ಹೋಗೋಣ"
ಒಂದು ವಾರದಿಂದ ಅಂಗಡಿ ತೆರೆಯದಿರುವುದಕ್ಕೆ ಒಂದಾದರೆ ಯಜಮಾನನ ಹೆಂಡತಿ ಸತ್ತು ಹೋಗಿರಬೇಕು ಅಥವಾ ಅವರು ಊರು ಬಿಟ್ಟಿರಬೇಕು. ಬೇರೇನು ಆಗೋದಕ್ಕೆ ಸಾಧ್ಯ ಇಲ್ಲ ಇದನ್ನೇ ನಂಬಿಕೊಂಡು ಅಲ್ಲಿಂದ ಹೊರಟೆ. ಅದನ್ನೆ ನಾಲ್ಕೈದು ಜನರಲ್ಲಿ ಹೇಳಿದ್ದೆ ಕೂಡ. ಮಾರನೇ ದಿನ ಅಂಗಡಿ ತೆರೆದಿತ್ತು. ಇಬ್ಬರೂ ನಗುತ್ತಾ ಮಾತಾಡ್ತಿದ್ರು. ಯಾವುದನ್ನೂ ಕಳೆದುಕೊಂಡ ಸೂಚನೆಯೂ ಇರಲಿಲ್ಲ.
"ಏನ್ಸಾರ್ ಒಂದು ವಾರ ಕಾಣಲಿಲ್ಲ"
"ಊರಿನ ಜಾತ್ರೆಗೆ ಹರಕೆ ತೀರಿಸೋಕೆ ಹೋಗಿದ್ವಿ"
ನನ್ನ ಕಥೆ ಕಸದ ಬುಟ್ಟಿ ಸೇರಿತ್ತು. ಊಹೆಗಳನ್ನ ರೆಕ್ಕೆ ಕಟ್ಟಿ ಹಾರಿಬಿಡಬಹುದು. ಅದ್ಯಾವತ್ತೂ ನಿಜದ ದಾರಿ ಹಿಡಿಯುವುದಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ