ಸ್ಟೇಟಸ್ ಕತೆಗಳು (ಭಾಗ ೨೭೯) - ಮರ ಹೂ ಬಿಟ್ಟಿದೆ

ಸ್ಟೇಟಸ್ ಕತೆಗಳು (ಭಾಗ ೨೭೯) - ಮರ ಹೂ ಬಿಟ್ಟಿದೆ

ನಮ್ಮೂರ ಮಾವಿನ ಮರ ಹೂ ಬಿಟ್ಟಿದೆ. ನಿಮಗದು ವಿಶೇಷ ಅಂತ ಅನಿಸಲಿಕ್ಕಿಲ್ಲ. ಆದರೆ  ನಮ್ಮೂರಿಗೆ ಮತ್ತು ನನಗೆ ಇದು ವಿಶೇಷವೇ. ನಮ್ಮೂರಲ್ಲಿ ಹೂ ಬಿಟ್ಟು ಕಾಯಿ ಕೊಡುವ ಮರ ಇದೊಂದೇ. ಉಳಿದದ್ದೆಲ್ಲ ಸುಮ್ಮನೆ ಹಾಗೆ ನಿಂತಿರುತ್ತವೆ. ಎಲೆಗಳನ್ನು ಉದುರಿಸಿಕೊಂಡು ಮತ್ತೆ ಎಲೆಗಳನ್ನು ತುಂಬಿಸಿಕೊಂಡು ಹಸಿರಾಗಿ ಯಾವ ಹಣ್ಣನ್ನು ಬಿಟ್ಟಿಲ್ಲ .

ನಾವು ಪ್ರೈಮರಿ ಸ್ಕೂಲ್ ಅಲ್ಲಿರುವಾಗ ಆ ಮರಗಳು ಹಣ್ಣು ಬಿಡುತ್ತಿದ್ದವು. ನಾವು ದೊಡ್ಡೋರಾದ್ವಿ ಊರು ಬಿಟ್ವಿ ಅದು ಹಣ್ಣು ಕೊಡುವುದನ್ನು ನಿಲ್ಲಿಸ್ತು. ನಾವು ಊರು ಬಿಟ್ಟಿದ್ದಕ್ಕೆ ಅದಕ್ಕೆ ಬೇಜಾರಾಗಿರಬೇಕು. ಆಮೇಲೆ ಯಾರತ್ರ ಕೇಳೋದು ಅಂತ ಗೊತ್ತಾಗ್ಲಿಲ್ಲ. ಹಾಗಾಗಿ ಬೆಳಗ್ಗೆ 5 ರಿಂದ 6 ಮರದ ಪಕ್ಕ ಕೂತರೆ ಅದು ಮಾತಾಡುತ್ತದೆ ಅಂತೆ ನಮ್ಮಜ್ಜ ಹೇಳ್ತಾಯಿದ್ರು. ಅದಕ್ಕಾಗಿ ಕೇಳಿ ಬಿಡೋಣ ಅಂತ ಹಣ್ಣು ಬಿಡುತ್ತಿದ್ದ ನಮ್ಮನೆ ಮರದ ಹತ್ತಿರ ಕೂತು ಕೇಳಿದಕ್ಕೆ ಮರ ಹೇಳಿತು "ನೋಡು ನಾನು ಹಣ್ಣು ಕೊಡುತ್ತೇನೆ ಯಾಕೆಂದರೆ ನೀನು ಆಗಾಗ ನನ್ನ ಹತ್ತಿರ ಬರುತ್ತಿಯಾ, ಹತ್ತಿ ನನ್ನ ಕೊಂಬೆಗಳನ್ನು ಮುರೀತಿಯ. ಕಲ್ಲು ಬಿಸಾಕ್ತಿಯ. ಕೋಲು ಬಿಸಾಕಿ ಹೇಗಾದರೂ ಮಾಡಿ ಹಣ್ಣು ತಿನ್ನಬೇಕು ಅಂತ ಬಯಸುತ್ತಿಯ. ನೀನಿಷ್ಟು ಪ್ರಯತ್ನಪಡುವಾಗ ನಾನು ಹಣ್ಣು ಬಿಡದಿದ್ದರೆ ಸರಿಯಾಗುವುದಿಲ್ಲ. ನಮ್ಮಿಬ್ಬರ ನಡುವೆ ಬಾಂಧವ್ಯ ಇದೆ. ನೀನು ಯಾವತ್ತು ನನ್ನ ಸಾಯಿಸಬೇಕು ಅಂತ ಯೋಚನೆ ಮಾಡಿಲ್ಲ. ಇನ್ನು ಹೆಚ್ಚು ಸಿಗಬೇಕು ಅಂತ  ಯೋಚಿಸ್ತಿ. ಹಾಗಾಗಿ ನಾನು ಹಣ್ಣು ಬಿಡುತ್ತೇನೆ.  ಅವರ ಹತ್ತಿರ ಯಾರೂ ಹೋಗುವುದಿಲ್ಲ .ಕಾಡುವುದಿಲ್ಲ ಕೊಂಬೆ ಮುರಿಯುವುದಿಲ್ಲ. ಪ್ರತಿಸ್ಪಂದನ ಇಲ್ಲದಿದ್ದಾಗ ಬದುಕು ಹೇಗೆ. ಅದಕ್ಕಾಗಿ ನಾನು ಹೂವು ಹಣ್ಣು ಬಿಟ್ಟು ಜೀವಂತವಾಗಿದ್ದೇನೆ. ಕಲ್ಲು ಬಿಸಾಕು ಹೆಚ್ಚು ಕೊಡುತ್ತೇನೆ ಇದು ನನ್ನ ಸಿದ್ಧಾಂತ ".

ನನಗೆ ಈ ಸಿದ್ದಾಂತ ತುಂಬಾ ಇಷ್ಟ ಆಯ್ತು. ಅದಕ್ಕೆ ಒಂದಷ್ಟು ಕಲ್ಲು ರಾಶಿ ಹಾಕಿ ಕೆಲಸಕ್ಕೆ ಹೊರಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ