ಸ್ಟೇಟಸ್ ಕತೆಗಳು (ಭಾಗ ೨೮೯) - ರಸ್ತೆ

ನನ್ನ ಮುಂದೆ ಎರಡು ದಾರಿಗಳು ಎದುರಾದವು. ಯಾವ ದಾರಿಯನ್ನು ಆಯ್ದುಕೊಳ್ಳಬೇಕು ಅನ್ನೋದು ನನ್ನ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಎರಡು ದಾರಿಯು ತುಂಬಾ ಒಳ್ಳೆಯದೇ ಮತ್ತು ನಿಜದ ದಾರಿಗಳು. ಇದೆರಡೂ ಗುರಿಯ ಕಡೆಗೆ ಸಾಗುತ್ತವೆ ಅನ್ನುವ ಫಲಕ ಕೂಡಾ ಹಾಕಿದ್ದರು. 2 ದಾರಿಗಳ ಆರಂಭದಲ್ಲಿ ಇಬ್ಬರು ನಿಂತಿದ್ದಾರೆ, ಒಬ್ಬ ಹೇಳುತ್ತಾನೆ "ನಾಳೆ ಅನ್ನೋದು ನಂಬಿಕೆ, ನಾಳೆ ಒಳ್ಳೆಯದಾಗುತ್ತೆ, ನಾಳೆ ಶುಭದಿನ, ಹಾಗೆಂದು ನೀನು ಹೆಜ್ಜೆ ಹಾಕಿದರೆ ಗುರಿಯನ್ನು ಖಂಡಿತ ತಲುಪುತ್ತೀಯಾ ಇದೇ ಸತ್ಯ"
ಆದರೆ ಪಕ್ಕದ ರಸ್ತೆಯ ಮನುಷ್ಯ " ನಾಳೆ ಅನ್ನುವವರು ಮನೆಹಾಳು, ಇಂದು ಮಾತ್ರ ಸತ್ಯ. ಇದನ್ನು ನಂಬಿದರೆ ಮಾತ್ರ ಬದುಕು. ನಾಳೆ ಅನ್ನೋದು ಶಾಶ್ವತ ಅಲ್ಲ" ಅಂತಿದ್ದ. ಎರಡನ್ನೂ ಯೋಚನೆ ಮಾಡಿದೆ. ಎರಡು ಸತ್ಯವೇ. ನಾನು ಅಳವಡಿಸಿಕೊಳ್ಳಬೇಕಾದ ಮೊದಲ ಸತ್ಯ ಯಾವುದು ಅನ್ನೋ ಪ್ರಶ್ನೆ ಹಾಗೆ ಉಳಿದು ಬಿಟ್ಟಿದೆ. ಹಾಗಾಗಿ ಎರಡು ದಾರಿಗಳು ಸೇರುವಂತಹ ಜಾಗದಲ್ಲಿ ನಿಂತಿದ್ದೇನೆ. ಮುಂದೆ ಚಲಿಸುವ ದಾರಿ ಗೊತ್ತಾಗ್ತಾ ಇಲ್ಲ. ನಿಮಗೆ ಗೊತ್ತಿರಬಹುದು ಅಂತ ಹೇಳಿ ಪ್ರಶ್ನೆಯನ್ನ ನಿಮ್ಮ ಮುಂದಿಟ್ಟಿದ್ದೇನೆ. ನನ್ನ ದಾರಿ ಆಯ್ಕೆಯನ್ನು ತಿಳಿಸುವಿರೆಂದು ನಂಬಿದ್ದೇನೆ. ಒಂದು "ನಾಳೆಯ ನಂಬಿಕೆಯ ರಸ್ತೆ" ಇನ್ನೊಂದು "ಇಂದಿನ ನಂಬಿಕೆಯ ರಸ್ತೆ" ನಾನಾರಿಸಬೇಕಾದ ರಸ್ತೆ ಯಾವುದು? ನಿಮ್ಮ ಅನಿಸಿಕೆಗಾಗಿ ಕಾಯುತ್ತಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ