ಸ್ಟೇಟಸ್ ಕತೆಗಳು (ಭಾಗ ೨೯೩) - ಧರಿಸು

ಅವತ್ತು ಶಾಲೆಯಲ್ಲಿ ನಿನ್ನ ಜೀವನ ಚೆನ್ನಾಗಿರಬೇಕಾದ್ರೆ ನಗುವನ್ನು ಧರಿಸಬೇಕು. ನಗುವೊಂದು ಆಭರಣವಿದ್ದಂತೆ ಅಂತ ಅಂದಿದ್ರು .ನಾನು ಅದನ್ನೇ ನಂಬಿದ್ದೆ. ಮನೆಯಲ್ಲಿ ಏನೋ ಬರೀತಾ ಇರುವಾಗ ಅದನ್ನೇ ಮನನ ಮಾಡುತ್ತಿದ್ದೆ . ಅದನ್ನು ಕೇಳಿದ ಅಪ್ಪ ಹತ್ತಿರ ಬಂದು "ಇದನ್ನು ಯಾರು ಹೇಳಿಕೊಟ್ಟರು" "ಶಾಲೆಯಲ್ಲಿ ಮೇಷ್ಟ್ರು ಹೇಳಿದ್ರು" " ಅವರು ಹೇಳಿರುವುದು ಸತ್ಯ, ಆದರೆ ನಾವು ಒಂದು ಬಟ್ಟೆಯನ್ನು ಧರಿಸುತ್ತೇವೆ .ಅದೇ ಬಟ್ಟೆಯನ್ನು ಪ್ರತಿದಿನ ಧರಿಸಲು ಆಗುವುದಿಲ್ಲ ಬದಲಾಯಿಸುತ್ತೇವೆ. ಆಭರಣ ನಾವು ಖರೀದಿಸಬೇಕಾಗುತ್ತದೆ. ಎಲ್ಲ ಸಂದರ್ಭಗಳಲ್ಲೂ ನಾವದನ್ನ ಧರಿಸುವುದಿಲ್ಲ.
ಹಾಗಿರುವಾಗ ನಗು ಅನ್ನೋದನ್ನ ಧರಿಸುವುದು ಹೇಗೆ? ಅದಕ್ಕೆ ಸರಿಯಾಗಿ ತಿಳುಕೊ, ನಗು ಅನ್ನೋದು ನಮ್ಮೊಳಗಿನ ಜೀವ. ನಿನ್ನ ದೇಹದೊಳಗೆ ಗಾಳಿ ಚಲಿಸುತ್ತಿರುವಷ್ಟು ದಿನವೂ ನಗು ನಿನ್ನೊಳಗೆ ಗೂಡು ಕಟ್ಟಿರುತ್ತದೆ.
ಅದನ್ನ ಧರಿಸುವುದಲ್ಲ .ನಿನ್ನ ದೇಹದ ಉಸಿರು ನಿಂತ ದಿನಕ್ಕೆ ನಗು ಉಸಿರಿನೊಂದಿಗೆ ಹೊರಟು ಹೋಗಿರುತ್ತದೆ .ನಗು ನಿನ್ನ ಜೀವವಾಗಬೇಕು ಜೀವನವಾಗಬೇಕು .ಈ ಆಲೋಚನೆ ಎಲ್ಲರಲ್ಲಿ ಬಂದರೆ ಜಗತ್ತೇ ನಗುತ್ತಿರುತ್ತದೆ". ಅಪ್ಪನ ಮಾತು ಹೌದೆನಿಸಿತು. ನಾಳೆಯೇ ಮೇಷ್ಟ್ರ ಬಳಿ ಕೇಳಬೇಕು ಅಂತ ನಿರ್ಧಾರ ಮಾಡಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ