ಸ್ಟೇಟಸ್ ಕತೆಗಳು (ಭಾಗ ೩೧೫) - ಕೈ ತೊಳೆದಲ್ಲಿ...

ಸ್ಟೇಟಸ್ ಕತೆಗಳು (ಭಾಗ ೩೧೫) - ಕೈ ತೊಳೆದಲ್ಲಿ...

ಕಾಲೇಜಿನ ಕಡೆಯಿಂದ ಸ್ಪರ್ಧೆಯೊಂದಕ್ಕೆ ಬೇರೆ ಊರಿನ ಕಾಲೇಜಿಗೆ ಗೆಳೆಯರ ಜೊತೆ ತೆರಳಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಜೊತೆಗೆ ಹೊಸ ಮುಖಗಳನ್ನು ನೋಡುವ ಸಂಭ್ರಮ. ಬೆಳಿಗ್ಗೆ ಮಾಡಿದ್ದ ಇಡ್ಲಿ-ಸಾಂಬಾರ್ ತಿನ್ಕೊಂಡು ಕೈ ತೊಳೆಯೋಕೆ ಟ್ಯಾಪ್ ಬಳಿ ನಿಂತಾಗ ಅವಳು ಯಾರು ಅಂತ ಗೊತ್ತಿಲ್ಲ ಟ್ಯಾಪ್ ಆನ್ ಮಾಡಿಬಿಟ್ಟು ನನಗೆ ಕೈ ತೊಳೆಯೋದಕ್ಕೆ ಸಹಾಯ ಮಾಡಿದ್ಲು. ನನ್ನನ್ನು ನೋಡಿ ನಕ್ಕು ಮುಂದುವರೆದಳು. ಅವಳನ್ನ ಮತ್ತೆ ಮಾತಾಡಿಸಬೇಕು ಅನ್ನಿಸ್ತು. ಒಂದು ಕ್ಷಣ ನೋಡಿದ್ದ ಮುಖಚಹರೆ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ನನ್ನ ಸ್ಪರ್ಧೆ ಇದ್ರೂ ಅದನ್ನು ಮುಗಿಸಿಕೊಂಡು ಅವಳ ಹುಡುಕಾಟ ಶುರು ಮಾಡಿದೆ. ಐದಂತಸ್ತಿನ ದೊಡ್ಡ ಕಾಲೇಜು ಮೇಲ್ಗಡೆ ಒಮ್ಮೆ ಕೆಳಗಡೆ ಒಮ್ಮೆ ನನ್ನ ಪ್ರಯಾಣ ಸಾಗುತ್ತಲೇ ಇತ್ತು. ಮಧ್ಯಾಹ್ನದವರೆಗೆ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಮಧ್ಯಾಹ್ನ ಮತ್ತೆ ಊಟ ತೆಗೆದುಕೊಂಡು ಬಂದು ಕೈತೊಳೆಯುವ ಜಾಗದ ಪಕ್ಕದಲ್ಲೇ ಕುಳಿತು ಊಟ ಮಾಡಲಾರಂಭಿಸಿದೆ. ಯಾಕೆಂದರೆ ಅವಳು ಕೈತೊಳೆಯಲು ಇಲ್ಲಿಗೆ ಬರಬೇಕಲ್ವಾ?. ಎಲ್ಲರ ಊಟ ಮುಗಿದರೂ ಅವಳು ಕಾಣೋಕೆ ಸಿಕ್ತಾ ಇಲ್ಲ. ನನ್ನ ಪ್ರಕಾರ ಅವಳು ಕರ್ನಾಟಕದವಳು ಅಲ್ಲಾ ಅಂತ ಅನ್ಸುತ್ತೆ. ಯಾಕೆಂದರೆ ಅವಳ ಕಣ್ಣು ನಗು ಮತ್ತು ಕೈ ತೊಳೆಯೋದಕ್ಕೆ ಸ್ವಲ್ಪ ಕ್ಷಣ ಹಿಂದೆ ತನ್ನ ಗೆಳತಿಯ ಜೊತೆ ಮಾತನಾಡಿದ ಭಾಷೆಯನ್ನು ನೋಡಿ ಅವಳ ರಾಜ್ಯ ಬೇರೆ ಅಂತ ಅಂದುಕೊಂಡುಬಿಟ್ಟೆ. ಅವಳು ಚೆನ್ನಾಗಿದ್ದಾಳೆ ಹಾಗಾಗಿ ಹುಡುಕುವ ಮನಸಾಯಿತು. ನನಗೇನು ದೇವರಾಣೆ ಅವಳ ಮೇಲೆ ಪ್ರೀತಿ ಆದದ್ದಲ್ಲ ಆದರೆ ಒಂದು ಕ್ಷಣ ಅವಳನ್ನು ನೋಡುವಾಗ ಖುಷಿಯಾಯಿತು ಆ ಖುಷಿಯನ್ನು ಹೆಚ್ಚು ಮಾಡೋಣ ಅಥವಾ ಒಂದೆರಡು ಮಾತಾಡೋಣ ಅನ್ನುವ ಆಸೆ ಅಷ್ಟೇ. ಹಾಗಾಗಿ ಸ್ಪರ್ಧೆ ಮುಗಿಯಿತು ಬಹುಮಾನವು ಸಿಕ್ತು ಕಾಲೇಜು ಬಿಟ್ಟು ಬಂದ್ವಿ. 

ಪ್ರತಿದಿನ ಊಟ ಮಾಡಿ ಕೈ ತೊಳೆಯುವಾಗ ಆಕೆ ನೆನಪಾಗ್ತಾಳೆ. ನಗುಮುಖ ಹಾಗೆ ಕಣ್ಣ ಮುಂದೆ ರಪ್ಪಂತ ಪಾಸ್ ಆಗುತ್ತೆ. ಮತ್ತೆ ಕಾಯುತ್ತಿದ್ದೇನೆ ಇನ್ನೊಂದು ಸ್ಪರ್ಧೆಗೆ. ಅಲ್ಲಿ ಕೈತೊಳೆಯುವ ಅಲ್ಲಿ ಮತ್ತೆ ಭೇಟಿಯಾಗುತ್ತಾಳೆ ಏನೋ ಎನ್ನುವ ಕುತೂಹಲದೊಂದಿಗೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ