ಸ್ಟೇಟಸ್ ಕತೆಗಳು (ಭಾಗ ೩೨೮) - ಕಾಯಬೇಕು

ಸ್ಟೇಟಸ್ ಕತೆಗಳು (ಭಾಗ ೩೨೮) - ಕಾಯಬೇಕು

ಮೂರು ಕಲ್ಲುಗಳ ಮೇಲೆ ಇಟ್ಟಿರುವ ಪಾತ್ರೆಯೊಳಗೆ, ಕೆಳಗಿನ ಬೆಂಕಿಯ ಬಿಸಿಗೆ ಪಾತ್ರೆಯ ಒಳಗಿನ ಅನ್ನ ಕೊತಕೊತನೆ ಬೇಯುತ್ತಿದೆ .ಅದನ್ನ ನೋಡುತ್ತಾ ತುಂಬಿದ ಕಣ್ಣುಗಳಿಂದ ಇಳಿದ ಕಣ್ಣೀರು ಉರಿಯುತ್ತಿರುವ ಬೆಂಕಿಯ ಮೇಲೆ ಬಿದ್ದು ಕ್ಷಣದಲ್ಲಿ ಮಾಯವಾಗುತ್ತಿದೆ. ಇಲ್ಲ ಆ ಮನೆಯೊಳಗೆ ಬೇರೆ ಯಾರೂ ಇಲ್ಲ ಅಮ್ಮನ ಹೊರತು. ಕಣ್ಣೀರಿಗೆ ಕಾರಣ ಯಾರು ತೊರೆದು ಹೋದದಕ್ಕಲ್ಲ. ಬದುಕಿನ ಅನಿವಾರ್ಯತೆಗಾಗಿ ಊರು ಬಿಟ್ಟಿರುವುದಕ್ಕೆ. ಓದುವಷ್ಟು ಸಮಯ ತನ್ನ ಜೊತೆಗೆ ತನ್ನ ಮನೆಯಲ್ಲಿದ್ದು ಓದಿದ್ದ ಮಗ. ಆದರೆ ಊರಲ್ಲಿ ಕೆಲಸ ಸಿಗಬೇಕಲ್ಲ, ಸ್ವಂತ ದುಡಿಮೆ ಮಾಡೋಣ ಅಂತ ಅಂದ್ರೆ ಜಮೀನಿಲ್ಲ .ನಂಬಿ ಸಾಲ ಕೊಡೋದಕ್ಕೆ ಆಧಾರವೂ ಇಲ್ಲ, ಹಾಗಾಗಿ ದೊಡ್ಡ ಊರಿಗೆ ಕೆಲಸಕ್ಕೆ ಹೊರಟಿದ್ದಾನೆ. ಬೆಳಗ್ಗೆ ಒಂದು ಕೆಲಸ, ರಾತ್ರಿ ಒಂದು ಕೆಲಸ, ಊಟಕ್ಕೆ ನಿದ್ದೆಗೆ ಸಮಯವಿಲ್ಲ. ದುಡ್ಡು ಮಾಡೋದು ಒಂದೇ ಗುರಿ. ಯಾಕೆಂದರೆ ಅಪ್ಪ ಮಾಡಿಟ್ಟು ಹೋದ ಸಾಲ, ಅಮ್ಮನ ಊಟಕ್ಕೆ, ಮುಂದಿನ ಬದುಕಿಗೆ ದಾರಿಯೊಂದನ್ನು ನಿರ್ಧರಿಸಬೇಕಿದೆ. ಹಾಗಾಗಿ ಅಲ್ಲಿ ಆತ ದಿನವೂ ಅರ್ಧ ಹೊಟ್ಟೆಯಲ್ಲಿ ಬದುಕುತ್ತಿದ್ದಾನೆ. ಇಲ್ಲಿ ಅನ್ನ ಬೇಯುತ್ತಿದ್ದರೂ ಹೊಟ್ಟೆಯೊಳಗಿನ ಸಂಕಟ ಹೆಚ್ಚಾಗಿ ಉಂಡರೂ ಹೊಟ್ಟೆಗಿಳಿಯದ ಪರಿಸ್ಥಿತಿಯಲ್ಲಿ ಆಕೆ ಕಾಯುತ್ತಿದ್ದಾಳೆ. ಇಬ್ಬರ ನಿರೀಕ್ಷೆಯೂ ಒಂದೇ ಒಳ್ಳೆಯ ದಿನ ಬಂದೇ ಬರುತ್ತದೆ. ಕಾಲವೇ ಆ ದಿನಕ್ಕಾಗಿ ಇಬ್ಬರೂ ಜೊತೆಯಾಗಿ ಬದುಕುವ ಸಂಭ್ರಮ ದಿನಕ್ಕಾಗಿ ಚಲಿಸುತ್ತಾ ಕಾಯುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ