ಸ್ಟೇಟಸ್ ಕತೆಗಳು (ಭಾಗ ೩೩) - ಕವನ

ಸ್ಟೇಟಸ್ ಕತೆಗಳು (ಭಾಗ ೩೩) - ಕವನ

ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊಂದಿಕೆಯಾಗಿತ್ತು. ಮೊದಲ ಓದಿಗೆ ಅಕ್ಷರ ತಪ್ಪಿಲ್ಲದೆ ಕೊನೆಯ ಸಾಲಿಗೆ ತಲುಪಿದವನಿಗೆ ಪದ್ಯ ಓದಬಹುದು ಅನ್ನುವ ಖುಷಿ ಸಿಕ್ಕಿತು. ಆದರೆ ಅಲ್ಲಿ ಬಳಸಿದ ಪದಗಳ ಅರ್ಥ ನನ್ನೊಳಗೆ ಇಳಿಯುತ್ತಿಲ್ಲ. 

ಕವನದೊಳಗೆ ಜೀವಿಸಬೇಕು, ಅದನ್ನು ಓದಿ ದಾಟಿಸಬೇಕಿತ್ತು. ಅರ್ಥವಿಲ್ಲದ ಪದಗಳ ಉಚ್ಚಾರಕ್ಕೆ ನಾನು ಸಿದ್ಧನಿರಲಿಲ್ಲ. ನಾನು ಓದುವ ಕವನವನ್ನು ನನ್ನ ಕಿವಿ ನೋಡಬೇಕು, ಕೇಳುಗರ ಕಿವಿಯೂ ನೋಡಬೇಕು. ಹಾಗಾದರೆ ಬರೆದ ಕವಿಗೆ ನೆಮ್ಮದಿ. ನಾಲ್ಕು ರಾತ್ರಿ ಹಗಲುಗಳು ವ್ಯರ್ಥವಾದವು ಅರ್ಥ ಹುಡುಕುವುದರಲ್ಲಿ. ನಾನು ಕೇಳಿದವರು ನೀಡಿದ ಅರ್ಥವನ್ನು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಂದು ಶನಿವಾರ ಕೆಲಸದ ನಿಮಿತ್ತ ಊರು ಬಿಟ್ಟಿದ್ದೆ. ಪರವೂರಿನಲ್ಲಿ ಬಂದು ಇಳಿದಾಗ ನನ್ನ ಕಿಸೆಯಲ್ಲಿದ್ದ ಪರ್ಸು ಮಾಯವಾಗಿತ್ತು. ಮೊಬೈಲು ಎಲ್ಲೋ ತಪ್ಪಿಹೋಗಿತ್ತು. ಕೆಲಸ ಮುಗಿಸಲೇ ಬೇಕಾಗಿದ್ದರಿಂದ ಪಾದಕ್ಕೆ ಪರಿಸ್ಥಿತಿ ವಿವರಿಸಿ ನಡೆದೆ. ಹೊಟ್ಟೆಯಲ್ಲಿ ಕ್ಷಮೆ ಕೇಳಿದೆ. ದಿನವಿಡೀ ಉಪವಾಸದ ನಡಿಗೆ ನನ್ನದಾಗಿತ್ತು. ತಿರುಗಿ ಬರೋಕೆ ಯಾವುದೋ ಗಾಡಿ ಬೈಕು ಲಾರಿಗಳನ್ನು ಹಿಡಿದು ತಲುಪಿದೆ. ನನ್ನ ಕೋಣೆಯಲ್ಲಿ ಕುಳಿತು ನೀರು ಕುಡಿದಾಗ ಟೇಬಲ್ ಮೇಲಿದ್ದ ಕವನ ಕೈಗೆತ್ತಿಕೊಂಡೆ. ಮೊದಲ ಅಕ್ಷರದಿಂದ ಕೊನೆಯ ಅಕ್ಷರದ ವರೆಗಿನ ಎಲ್ಲಾ ಅರ್ಥಗಳು ಸ್ಫುರಿಸಿದವು. ಹೊಟ್ಟೆತುಂಬಾ ಉಂಡು ಮರುದಿನದ ಯೋಚನೆಯಲ್ಲಿ ಮಲಗಿದೆ. ಕವನವನ್ನು ನನ್ನ ಕಿವಿ ನೋಡುತ್ತಿತ್ತು....

-ಧೀರಜ್ ಬೆಳ್ಳಾರೆ 

ಇಂಟರ್ನೆಟ್ ಚಿತ್ರ ಕೃಪೆ