ಸ್ಟೇಟಸ್ ಕತೆಗಳು (ಭಾಗ ೩೪೫) - ಚೌಕಟ್ಟು
ನನ್ನ ಕೆಲವೊಂದು ಯೋಚನೆಗಳಿಗೆ ಉತ್ತರ ಸಿಗುವುದಿಲ್ಲ. ಅದಕ್ಕೆ ಸಿಕ್ಕಿದವರ ಬಳಿಯೆಲ್ಲಾ ಪ್ರಶ್ನೆ ಕೇಳುತ್ತಿರುತ್ತೇನೆ. ಅಲ್ಲಿ ಸಿಕ್ಕಿದ ಉತ್ತರಗಳಲ್ಲಿ ನನಗೆ ಒಪ್ಪಿತವಾದದ್ದನ್ನು ಅಳವಡಿಸಿಕೊಳ್ಳುತ್ತೇನೆ."ಈ ಬದುಕು ಯಾಕೆ ಒಂದಿಷ್ಟು ಯೋಚನೆಗಳನ್ನು ಹುಟ್ಟಿಸಿ ಮುಂದಿನ ದಾರಿಗಳನ್ನು ಸ್ಥಗಿತಗೊಳಿಸಿ ಮುಂದೇನು ಅನ್ನುವ ಪ್ರಶ್ನೆಯನ್ನು ಮತ್ತೆ ಮತ್ತೆ ಹುಟ್ಟಿಸುತ್ತಿರುತ್ತದೆ"ಇದನ್ನು ಐಶ್ವರ್ಯ ಮೇಡಂ ಬಳಿ ಕೇಳಿದಕ್ಕೆ ಅವರು ಉತ್ತರ ಹೇಗಿತ್ತು " ಸರ್ ನಮ್ಮ ಫೋಟೋ ಚೆನ್ನಾಗಿ ಕಾಣಬೇಕು ಅಂತ ಬಯಸುತ್ತೇವೆ. ಅದಕ್ಕೆ ಒಂದಾದರೆ ಫೋಟೋ ತೆಗೆಯುವ ಕಲೆ ಗೊತ್ತಿರಬೇಕು , ನಮ್ಮ ಬಟ್ಟೆ, ಬೆನ್ನ ಹಿಂದಿರುವ ಸ್ಥಳ, ಪ್ರದೇಶ ಇವೆಲ್ಲವೂ ಕೂಡ ಹೊಂದಾಣಿಕೆಯಾದಾಗ ನಮ್ಮ ಫೋಟೋ ಚೆನ್ನಾಗಿ ಕಾಣುತ್ತೆ. ಹಾಗೆಯೇ ಕೆಲವೊಂದು ಸಲ ನಾವು ನಮ್ಮ ಫೋಟೋವನ್ನು ಯಾವುದೋ ಚೌಕಟ್ಟಿನೊಳಗೆ ಹಾಕಿ ನಿಲ್ಲಿಸಲು ಪ್ರಯತ್ನಿಸುತ್ತೇವೆ. ಕೆಲವೊಂದು ಸಲ ನಮಗೆ ಹೊಂದಾಣಿಕೆಯಾಗದ ಚೌಕಟ್ಟಿನಿಂದಾಗಿ ನಮ್ಮ ಮೌಲ್ಯ ಕಡಿಮೆಯಾಗಬಹುದು. ನಮಗೆ ಸಿಗಬೇಕಾದ ಮೌಲ್ಯ ಸಿಗದೇ ಇರಬಹುದು. ನಮಗಿಂತ ದೊಡ್ಡ ಚೌಕಟ್ಟಾದರೆ ನೋಡೋಕೆ ಅಂದ ಕಾಣದಿರಬಹುದು. ನಾವು ಮೊದಲೇ ತಯಾರಾಗಿರುವ ಯಾವುದೋ ಚೌಕಟ್ಟಿನೊಳಗೆ ನಮ್ಮ ಫೋಟೋವನ್ನು ಹಾಕಿಕೊಳ್ಳುವುದಕ್ಕಿಂತ ನಮ್ಮ ಫೋಟೋಗೆ ಹೊಂದಾಣಿಕೆಯಾಗುವ ನಮಗೆ ಬೇಕಾದ ಚೌಕಟ್ಟುಗಳನ್ನು ನಿರ್ಮಿಸಿ ಅದರೊಳಗೆ ನಮ್ಮ ಫೋಟೋವನ್ನ ಇಟ್ಟಾಗ ಭಾವಚಿತ್ರದ ಅಂದ ಮೌಲ್ಯ ಹೆಚ್ಚುತ್ತದೆ. ಜೊತೆಗೆ ನಮಗೂ ಒಂದು ನೆಮ್ಮದಿ ಸಿಗುತ್ತದೆ. ಇದೆಲ್ಲವನ್ನು ಯಾಕೆ ಹೇಳಿದೆ ಅಂತ ಅಂದರೆ ನಾವು ನಮ್ಮ ಬದುಕಿನ ಭಾವಚಿತ್ರವನ್ನು ನಮ್ಮದೇ ಚೌಕಟ್ಟಿನೊಳಗೆ ಇಟ್ಟುಕೊಂಡಾಗ ಸಿಗುವ ಮೌಲ್ಯ ಯಾವುದೋ ಚೌಕಟ್ಟಿನೊಳಗೆ ನಮ್ಮ ಭಾವಚಿತ್ರವನ್ನು ತುರುಕಿಸಿದಾಗ ಸಿಗುವುದಿಲ್ಲ. ಭಾವಚಿತ್ರಕ್ಕೆ ಚೌಕಟ್ಟಿನ ನಿರ್ಮಾಣ ನಮ್ಮಿಂದಲೇ ಆಗಬೇಕು. ಈ ಆಲೋಚನೆ ನಮ್ಮಲ್ಲಿ ಇದ್ದಾಗ ಬದುಕು ಯಾಕೆ ಹೊಸತನವನ್ನ ಕಾಣುತ್ತಿಲ್ಲ ಬಯಸಿದಂತೆ ಆಗುತ್ತಿಲ್ಲ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ." ಅವರು ಹೇಳಿರುವ ಮಾತುಗಳನ್ನು ನನ್ನೊಳಗೆ ಇಳಿಸಿಕೊಂಡು ನನ್ನ ಭಾವಚಿತ್ರಕ್ಕೆ ಹೊಂದಾಣಿಕೆಯಾಗುವ ನನ್ನದೇ ಚೌಕಟ್ಟನ್ನು ನಿರ್ಮಾಣ ಮಾಡುವ ಯೋಚನೆಯನ್ನು ಆರಂಭಿಸಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ