ಸ್ಟೇಟಸ್ ಕತೆಗಳು (ಭಾಗ ೩೫೪) - ಗಾಲಿ

ಸ್ಟೇಟಸ್ ಕತೆಗಳು (ಭಾಗ ೩೫೪) - ಗಾಲಿ

ಮೂರು ಚಕ್ರಗಳ ಆಟೋ ಊರಿಡೀ ತಿರುಗಾಡಬೇಕು, ದಿನದ ಸಂಜೆಯ ಸಂಪಾದನೆಯನ್ನ ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಯ ಕೈಯಲ್ಲಿಟ್ಟರೆ ಅವರಿಗೊಂದು ನೆಮ್ಮದಿಯ ನಿದ್ದೆ. ಆದರೆ ಇತ್ತೀಚಿಗೆ ಆಟೋಗಳ ಸಂಖ್ಯೆ ಹೆಚ್ಚಾಗಿ ಬಿಟ್ಟಿದ್ದಾವೆ. ಜನಗಳು ಸ್ವಂತ ಗಾಡಿ ಇರೋ ಕಾರಣ ಆಟೋವನ್ನು ಏರುತ್ತಿಲ್ಲ. ರಾಜೇಶನಿಗೆ ತನ್ನ ಮನೆಯನ್ನು ನಿಭಾಯಿಸಬೇಕು, ಮಕ್ಕಳ ಶಿಕ್ಷಣದ ಖರ್ಚು ಏರುತ್ತಿದೆ, ಇವೆಲ್ಲದಕ್ಕೆ ನಿದ್ದೆ ಅನ್ನೋದು ದೂರ ಹೋಗಿಬಿಟ್ಟಿದೆ. ಹಗಲು-ರಾತ್ರಿ ಆಟೋ ಓಡಿಸುತ್ತಲೇ ದುಡ್ಡು ಕೂಡಿ ಇಡುತ್ತಿದ್ದಾರೆ. ಇತ್ತೀಚೆಗೆ ಗಮನಿಸಿದ ಹಾಗೆ ಊಟಕ್ಕೆ ತಿಂಡಿಗೆ ಎಲ್ಲೂ ಹೋಗುವುದಿಲ್ಲ, ಕೇಳಿದರೆ "ಟೀ ಮತ್ತೊಂದು ಬನ್ ಇದ್ರೆ ಸಾಕು ಸಾರ್ ಹೊಟ್ಟೆ ಫುಲ್ ಆಗುತ್ತೆ. ಹೊಟ್ಟೆ ತುಂಬುವುದು ನಾವೇನ್ ತಿಂತೀವಿ ಎಷ್ಟು ತಿಂತೀವಿ ಅಂತಲ್ಲ, ನಮ್ಮ ಮನಸ್ಸು ಯಾವಾಗ ಪೂರ್ತಿಯಾಗಿದೆ ಅಂದಾಗ ಆಗ ಹೊಟ್ಟೆ ತುಂಬುತ್ತೆ. ಇನ್ನು ಬೇಕು ಅನಿಸಿದಾಗ ತುಂಬಿರುವುದಿಲ್ಲ. ಅದು ಮನಸ್ಸಿನ ವಿಚಾರ. ಹಾಗಾಗಿ ನನಗೆ ಟೀ ಬನ್ ಗಳೇ ನನ್ನ ಹೊಟ್ಟೆಯನ್ನು ತುಂಬಿಸುತ್ತದೆ. ಆಟೋ ಓಡ್ಸೋಕೆ ಶಕ್ತಿಯನ್ನು ನೀಡುತ್ತದೆ. ಮತ್ತೊಂದು ಸಾರ್, ಈ ತಂದೆ ತಾಯಿ ಇಬ್ಬರೂ, ಮಕ್ಕಳನ್ನು ತಮ್ಮ ಒಂದು ವಾರದ ದಿನಚರಿಯ ಪ್ರತಿಕ್ಷಣವೂ ಮಕ್ಕಳನ್ನ ಜೊತೆಗೆ ಇರಿಸಿಕೊಳ್ಳಬೇಕು. ಆಗ ಮಕ್ಕಳಿಗೆ ತಂದೆ-ತಾಯಿಯ ಸಂಪಾದನೆಯ ಹಿಂದೆ ಏನು ಕಷ್ಟ ಇದೆ, ಶ್ರಮವೇನೂ, ಯಾರಿಂದ ಬೈಗುಳ ಸಿಕ್ಕಿದೆ, ಎಷ್ಟು ನಿದ್ದೆ ಬಿಟ್ಟಿದ್ದಾರೆ, ಇವೆಲ್ಲದರ ಪಟ್ಟಿ ಸಿಗುತ್ತದೆ. ಆಗ ಮಕ್ಕಳು ಖರ್ಚು ಕಡಿಮೆ ಮಾಡುತ್ತಾರೆ. ಇಷ್ಟು ಆಗ್ಬಿಟ್ರೆ ಬದುಕು ಚೆನ್ನಾಗಿರುತ್ತದೆ". ನನ್ನನ್ನ ಆಟೋ ಇಳಿಸಿ ದುಡ್ಡು ತಗೊಂಡು ಮತ್ತೊಂದು ಬಾಡಿಗೆಗೆ ಆಟೋ ಓಡಿಸಿಕೊಂಡು ಹೋಗಿಬಿಟ್ಟರು. ಈ ಮೂರು ಗಾಲಿಗಲೇ ಇವರ ಜೀವನದ ಗಾಲಿಗಳು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ