ಸ್ಟೇಟಸ್ ಕತೆಗಳು (ಭಾಗ ೩೬೪) - ದಂಪತಿ
ಆದರ್ಶ ದಂಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅದ್ಭುತ ದಂಪತಿಗಳು ಅವರು. ಊರು, ರಾಜ್ಯ, ದೇಶ-ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮದ ನಿರೂಪಣೆ ಹೆಸರುವಾಸಿಯಾದವರು. ಅವರ ಮಾತಿನ ಚತುರತೆ, ಇಬ್ಬರ ನಡುವಿನ ಹೊಂದಾಣಿಕೆ, ಗಂಡ-ಹೆಂಡತಿಯರಲ್ಲಿ ಇನ್ನಷ್ಟು ಮಾತನಾಡಿಸುವ ಹುಮ್ಮಸ್ಸು, ವಿನೋದ ಆಟಗಳ ಮೂಲಕ ವೇದಿಕೆಗೆ ಬಂದ ದಂಪತಿಗಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಹೀಗೆ ನವನವೀನ ವಿಧಾನಗಳಿಂದ ಆದರ್ಶ ದಂಪತಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಮೊದಲು ಉಚಿತವಾಗಿ ಕಾರ್ಯಕ್ರಮ ನಡೆಸುತ್ತಿದ್ದವರು ದಿನಕಳೆದಂತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದಾರೆ. ಕೆಲವೊಂದು ಕಡೆ ಅವರ ವಿಪರೀತ ಸಂಭಾವನೆಯನ್ನು ಕೇಳಿ ಆಯೋಜಕರು ಕಷ್ಟಪಟ್ಟು ಅದನ್ನ ಅವರಿಗೆ ದಯಪಾಲಿಸಿ ಕಾರ್ಯಕ್ರಮವನ್ನು ಪಡೆದುಕೊಳ್ಳುತ್ತಿದ್ದರು. ಇತ್ತೀಚಿಗೆ ಎಲ್ಲಾ ಕಡೆಯೂ ಅವರದೇ ಭಾವಚಿತ್ರಗಳು, ಅವರು ಬರುತ್ತಾರೆಂದರೆ ಹೆಚ್ಚೆಚ್ಚು ದಂಪತಿಗಳು ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುತ್ತಿದ್ದರು. ಮೊನ್ನೆತಾನೆ ಇದೇ ಆದರ್ಶ ದಂಪತಿ ಕಾರ್ಯಕ್ರಮ ನಡೆಸುವ ಗಂಡ ಹೆಂಡತಿ ಡೈವೋರ್ಸ್ ವಿಚಾರಣೆಗೆ ಕಟಕಟೆಯಲ್ಲಿ ನಿಂತಿದ್ದದ್ದು ವಿಪರ್ಯಾಸ. ವೇದಿಕೆಯಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸಿದ್ದ ಕಾರ್ಯಕ್ರಮ ಮನೆಯಲ್ಲಿ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ, ಇವರಿಬ್ಬರ ಸ್ವಪ್ರತಿಷ್ಠೆಯಲ್ಲಿ ಮಗು ಕೋರ್ಟಿನ ಬಾಗಿಲಲ್ಲಿ ಒಳಗೋ-ಹೊರಗೋ ಅನ್ನುವ ಗೊಂದಲದಿಂದ ತಲೆ ಒರಗಿಸಿ ನಿಂತುಬಿಟ್ಟಿದ್ದಾನೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ