ಸ್ಟೇಟಸ್ ಕತೆಗಳು (ಭಾಗ ೩೬೭) - ಆಕೆ ?
ಅವನಿಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಂಬಿಕೆಗಳು ಕುಸಿದು ಬಿಟ್ಟಿದ್ದಾವೆ. ಕಂಡಿದ್ದ ಕನಸುಗಳೆಲ್ಲ ಕಮರಿ ಹೋಗಿದ್ದಾವೆ. ಇಷ್ಟರವರೆಗೆ ನಂಬಿದ್ದು ಸುಳ್ಳು ಅಂತ ಗೊತ್ತಾದಾಗ, ಮುಂದೆ ಹೆಜ್ಜೆ ಹಾಕೋಕ್ಕಾಗದೆ ರಸ್ತೆ ಬದಿಯ ಮರದ ಬುಡದಲ್ಲಿ ಕುಳಿತು ಸುಮ್ಮನೆ ಯೋಚಿಸುತ್ತಿದ್ದಾನೆ. ಮಳೆ ಸುರಿಯುತ್ತಿದೆ, ಗುಡುಗು ಮಿಂಚುಗಳ ಆರ್ಭಟ. ದಾರಿ ಹೋಕರು ವಿಚಿತ್ರವಾಗಿ ಇವನನ್ನು ನೋಡಿದರು. ಇವನಿಗೆ ಅದಾವುದರ ಪರಿವೆಯೂ ಇಲ್ಲ .ಕಣ್ಣು ಬಿಟ್ಟಿದ್ದಾನೆ ಎದುರಲ್ಲಿ ಏನು ಆತನಿಗೇನೂ ಕಾಣುತ್ತಿಲ್ಲ .ಇಷ್ಟರವರೆಗೆ ಜೀವಿಸಿದ್ದ ಜೀವನ, ಜೊತೆಗಿದ್ದ ಬದುಕು, ಸುಳ್ಳು ಮೋಸ ಅಂತ ಗೊತ್ತಾದಾಗ ತನ್ನ ಕಣ್ಣನ್ನು ತಾನೇ ನಂಬದೇ ಕುರುಡನಾಗಿದ್ದ. ಆಗಿದ್ದಿಷ್ಟೇ ಪುಟ್ಟದೊಂದು ಪ್ರೀತಿ. ಜೊತೆಯಾಗಿ ಬದುಕಬೇಕೆನ್ನುವ ಆಸೆ. ಪ್ರೀತಿ ಶುರುವಾಗುವುದಕ್ಕೆ ಮೊದಲು ಊರಿನಲ್ಲಿ, ಮನೆಯಲ್ಲಿ, ದಿನವೂ ಬೈಗುಳ. ಕೆಟ್ಟ ಚಟಗಳನ್ನು ವಿಪರೀತ ಮೈಮೇಲೆ ಎಳೆದುಕೊಂಡು ಎಲ್ಲರಿಂದಲೂ ತಿರಸ್ಕಾರವನ್ನು ಅನುಭವಿಸಿಯೇ ದಿನದೂಡುತ್ತಿದ್ದವನು. ಹೇಗೆ ಪ್ರೀತಿಯಾಯಿತೋ ಗೊತ್ತಿಲ್ಲ .ಅವಳನ್ನ ಮತ್ತೆ ನೋಡಬೇಕು, ಅವಳೊಂದಿಗೆ ಕುಳಿತು ಮಾತನಾಡಬೇಕು .ಅವಳು ಜೀವನ ಸಂಗಾತಿ ಆಗಬೇಕು ಹೀಗೆಂದು ಬಯಸಿದವನು. ಅವಳು ಬದಲಾಯಿಸಿದಳು. ಕೆಟ್ಟ ಚಟಗಳನ್ನು, ದುರಭ್ಯಾಸಗಳನ್ನು, ಎಲ್ಲವನ್ನು ಬದಲಾಯಿಸಿ ತಿರಸ್ಕರಿಸಿದವರು ಗೌರವಿಸುವಂತೆ ಮಾಡಿಸಿದಳು. ಜವಾಬ್ದಾರಿ ಹೆಚ್ಚಾಯಿತು.
ಪ್ರೀತಿಯೂ ಕೂಡ. ದಿನವೂ ಅವಳೊಂದಿಗೆ ಚೂರು ಮಾತು. ಬದುಕಿನ ಕನಸು ಹೊತ್ತು ಮೈಮುರಿದು ದುಡಿದು. ಅವಳು ಇವನನ್ನು ಅಷ್ಟೇ ಹಚ್ಚಿಕೊಂಡಳು. ಇಬ್ಬರು ಕನಸಿನ ಬದುಕು ಶುರುವಾಗಿತ್ತು. ಮತ್ತೆ ಮತ್ತೆ ಅವಳಲ್ಲಿ ಕೇಳಿಕೊಂಡ ನೀನು ನನ್ನ ಜೊತೆ ಬದುಕುವುದು ಸತ್ಯ ತಾನೇ? ಅವಳನ್ನು ಬಿಟ್ಟು ಬೇರೆ ಬದುಕಿನ ಯೋಚನೆ ಅವನಲ್ಲಿರಲಿಲ್ಲ. ಅವಳು ನಿನ್ನ ಹೊರತು ಬದುಕೇ ಇಲ್ಲ ಅಂದುಬಿಟ್ಟಳು. ಆಗಾಗ ಗೆಳೆಯರ ಮಾತುಗಳು ಸಂಶಯ ಹುಟ್ಟಿಸಿದರೂ, ತಾ ನಂಬುವ ಜೀವ, ತನ್ನ ಬದಲಾಯಿಸಿದ ಬದುಕು ಅಂತವಳಲ್ಲ ಅಂದುಕೊಂಡೇ ಬದುಕಿದ. ಮತ್ತೆ ಹೆಚ್ಚು ದುಡಿಯೋದಕ್ಕೆ ಆರಂಭ ಮಾಡಿದ. ಅವಳು ಕೂಡ ಅದನ್ನೇ ನಂಬಿಸಿದಳು. ಇವನ ದುಡಿಮೆಯ ಒಂದಷ್ಟು ಭಾಗ ಅವಳ ಖುಷಿಗಾಗಿ ಮೀಸಲಿಟ್ಟ. ಪಡೆದುಕೊಂಡ ಎಲ್ಲವನ್ನು ಆಕೆ ಮರೆತು ಹೊರಟುಹೋದಳು. ನಂಬಿಕೆಯನ್ನ ಅಳಿಸಿ ಹೋದಳು. ಮೊಗ್ಗಿನಿಂದ ಹೂವಾಗುತ್ತಿದ್ದ ಮನಸ್ಸು ಮತ್ತೆ ಬಾಡುವ ಕಡೆಗೆ ಹೊರಟಿದೆ. ಮಳೆಯ ನೀರಿನಲ್ಲಿ ನೆನೆಯುತ್ತಾ ನಿಂತ ಅವನ ಮನಸ್ಸು ದಾರಿ ಯಾವ ಕಡೆಗೆ ಅಂತ ನೋಡುತ್ತಿದೆ ಎರಡು ಕವಲುಗಳು ಮತ್ತೆ ಹಳೆಯ ದಾರಿ? ಊರಿನವರಿಂದ ತಿರಸ್ಕಾರ ಅನುಭವಿಸಿದ ಕಡೆಗೆ, ಇಲ್ಲಾ ಅವಳ ಮುಂದೆ ಬದುಕಿ ತೋರಿಸಿ ಕಳೆದುಕೊಂಡ ರತ್ನವನ್ನು ಮತ್ತೆ ನೆನಪಿಸಿ ಅವಳು ದುಃಖಿಸುವಂತೆ ಮಾಡೋ ಕಡೆಗೆ. ದಾರಿಗಾಗಿ ಕಾಯುತ್ತಿದ್ದಾನೆ. ಎರಡು ಕಡೆಗೂ ಮಳೆ ಜೋರಾಗಿದೆ ಛತ್ರಿ ಇಲ್ಲ. ನೆನೆಯುತ್ತಲೇ ಸಾಗಬೇಕು. ಮಳೆ ನಿಂತು ನೆಲ ಒಣಗಿದರೂ ಹೃದಯವಲ್ಲ. ನಿರ್ಧಾರ ಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಎರಡು ದಾರಿಗಳು ಕರೆಯುತ್ತಿವೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ