ಸ್ಟೇಟಸ್ ಕತೆಗಳು (ಭಾಗ ೩೭೦) - ಭಾರ ಹಾಕು
"ಭಗವಂತನ ಮೇಲೆ ಭಾರ ಹಾಕಿ ಕೆಲಸ ಮುಂದುವರಿಸು "
"ಅಜ್ಜಾ, ಭಗವಂತನಿಗೆ ಹೀಗೆ ಎಲ್ಲರೂ ಭಾರ ಹಾಕುತ್ತಾ ಹೋದರೆ, ಅವನ ತಡೆದುಕೊಳ್ಳುವುದು ಹೇಗೆ? ನಾವು ನಮ್ಮ ಪ್ರಯತ್ನ ಮಾಡಬೇಕು. ಭಗವಂತ ಮೊದಲೇ ನಿರ್ಧಾರ ಮಾಡಿಟ್ಟಿರುತ್ತಾನೆ. ಹೀಗಾಗಬೇಕು ಅಂತ ನಿರ್ಧಾರವಾದ ಮೇಲೆ ವಿಶೇಷವಾಗಿ ಭಗವಂತನ ಮೇಲೆ ಒತ್ತಡ ಹೇರುವುದು ಸರಿಯಲ್ಲ ಅಲ್ವಾ?.
"ನೋಡುವಾಗ ನಮಗೆ ಭಾರ ಅನಿಸಿದ್ದು, ಭಗವಂತನಿಗೆ ಭಾರ ಅನಿಸುವುದಿಲ್ಲ. ನಮ್ಮನ್ನೇ ಹೊತ್ತಿರುವ ಭಗವಂತನಿಗೆ, ನಮ್ಮ ಇಷ್ಟಾರ್ಥಗಳು ನಮ್ಮ ನೋವುಗಳು, ನಮ್ಮ ಬೇಡುವಿಕೆಯ ಪಟ್ಟಿಗಳು, ಅದ್ಯಾವತ್ತೂ ಭಾರ ಅನಿಸುವುದಿಲ್ಲ. ನಾವು ಭೂತ ವರ್ತಮಾನ ಮತ್ತು ಭವಿಷ್ಯದಲ್ಲಿ ಬದುಕ್ತಾ ಇರೋರು ಹಾಗಾಗಿ ನಮಗೆಲ್ಲವೂ ಭಾರವಾಗಿರುತ್ತದೆ. ಪ್ರತಿದಿನವೂ ವರ್ತಮಾನದಲ್ಲಿ ಇರುವ ಭಗವಂತನಿಗೆ ಭಾರದ ಯೋಚನೆ ಇರುವುದಿಲ್ಲ. ನಾವು ಭಗವಂತನಿಗೆ ನೆನಪಿಸುವುದು ಏನಕ್ಕೆ ಅಂದರೆ, ಅದು ನಮ್ಮೊಳಗಿನ ಜಾಗೃತಿಗಾಗಿ, ನಮ್ಮೊಳಗಿನ ಮನಸ್ಸು ಜಾಗೃತವಾಗದೇ ಇದ್ದರೆ, ಏನಾದರೂ ಹೊಸತನ ಮಾಡಬೇಕು ಅನ್ನುವ ಯೋಚನೆಯೂ ಮೂಡದಿದ್ದರೆ ನಾವು ಮುಂದಡಿ ಇಡೋದಕ್ಕೆ ಆಗೋದಿಲ್ಲ. ಹಾಗಾಗಿ ಭಗವಂತನ ಮೇಲೆ ಭಾರ ಇಟ್ಟಾಗ ನಮ್ಮೊಳಗೆ ಕೆಲಸ ಮಾಡುವ ಮನಸ್ಸು ಬರುತ್ತದೆ. ಜೊತೆಗೆ ಭಗವಂತ ಜೊತೆಗಿರುತ್ತಾನೆ ಅನ್ನುವ ನಂಬಿಕೆಯೂ ಇರುತ್ತದೆ.ಇದೇ ಭಗವಂತನ ಧ್ಯಾನವೂ ಆಗುತ್ತದೆ. ಇದು ಭಗವಂತನ ಮೇಲೆ ಭಾರ ಇಡುವ ಕಾರಣ. ನಿನ್ನ ಕೆಲಸ ಮುಂದುವರಿಸು, ನಿನ್ನ ಮನಸ್ಸಿನ ಭಾರವನ್ನು ಭಗವಂತ ಖಂಡಿತವಾಗಿಯೂ ಹಗುರಗೊಳಿಸುತ್ತಾನೆ. ಇಷ್ಟೇ ಬದುಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ