ಸ್ಟೇಟಸ್ ಕತೆಗಳು (ಭಾಗ ೩೮೩) - ಬದುಕು

ಅವರವರ ಇಷ್ಟದ ಬದುಕನ್ನ ಅವರವರು ಬದುಕುತ್ತಾರೆ. ಅಂತ ನಾನಂದುಕೊಂಡಿದ್ದೆ. ಆದರೆ ಎಲ್ಲರೂ ಹಾಗಿರುವುದಿಲ್ಲ, ಯಾರದೋ ಇಷ್ಟಕ್ಕೆ ನಮ್ಮ ಬದುಕನ್ನು ಹೊಂದಿಸಿ ಕೊಂಡವರಿದ್ದಾರೆ ಅಥವಾ ತಮ್ಮ ಇಷ್ಟದ ಬದುಕನ್ನ ಬದುಕೋಕೆ ಹೆಣಗಾಡುತ್ತಲೇ ಇರುವವರು ಇದ್ದಾರೆ. ಇವತ್ತು ನಾ ಹೇಳೋ ಕತೆ ಅವರ ಬದುಕನ್ನು ಅವರಿಷ್ಟದ ಹಾಗೆ ಬದುಕುತ್ತಿರುವ ಒಬ್ಬರದು. ಹೆಸರು ವರ್ಷ ಮನೆಯ ಮುದ್ದಿನ ಮಗಳಾಗಿ ಬೆಳೆದವಳಿಗೆ, ಮನೆ ಜೊತೆಗೆ ಸುತ್ತಮುತ್ತಲಿನ ಪ್ರತಿಯೊಂದು ವಸ್ತು ಜೀವಿಗಳು ಕೂಡ ತನ್ನ ಬದುಕಿನದೇ ಭಾಗ ಅಂತ ಅನ್ನಿಸತೊಡಗಿತು. ಅಂದಿನಿಂದ ಎಲ್ಲವನ್ನ ಪ್ರೀತಿಸೋಕೆ ಆರಂಭಮಾಡಿದ್ದಳು. ಸಣ್ಣ ಗಿಡದ ಎಲೆಯೊಂದು ತುಂಡಾದರೂ ಕೂಡ ನೋವು ಅವಳೊಳಗೆ ಉಂಟಾಗುತ್ತಿತ್ತು. ಬೀದಿಯಲ್ಲಿ ಓಡಾಡುವ ನಾಯಿಮರಿ ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡಿದರೆ ಎಲ್ಲಿಂದಾದರೂ ಬಿಸ್ಕೆಟ್ ತಂದು ಅದಕ್ಕೊಂದಿಷ್ಟು ಆಹಾರ ನೀಡಿ ಹೋಗುತ್ತಿದ್ದಳು. ಹೀಗೆ ಅವಳಿಷ್ಟದ ಬದುಕನ್ನ ಬದುಕೋಕೆ ಆರಂಭ ಮಾಡಿದಳು. ಊರಿನಿಂದ ಕೆಲಸಕ್ಕೋಸ್ಕರ ಪರವೂರಿಗೆ ಬಂದಾಗ, ತನ್ನ ಆಸೆಯಂತೆ ಬದುಕೋದು ಮೊದಲು ಕಷ್ಟವಾದರೂ, ನಂತರ ಹೇಗಾದರೂ ಸರಿ ನನಗಿಷ್ಟದ ಬದುಕನ್ನ ಬದುಕಲೇಬೇಕು ಅಂತ ಹಠ ಹಿಡಿದು ಅದಕ್ಕೆಂದೇ ಒಪ್ಪಿತವಾದ ಸಣ್ಣ ಮನೆಯೊಂದನ್ನು ಖರೀದಿಸಿ, ತಾನು ಪ್ರೀತಿಸುವ ಪ್ರತಿಯೊಂದು ಜೀವಿಗಳು ಅಲ್ಲೇ ಇರುವ ಹಾಗೆ ನೋಡಿಕೊಂಡು ಬದುಕು ಆರಂಭ ಮಾಡಿದಳು. ಮೊದಲೆಲ್ಲಾ ಅವಳಿಗೆ ಅದೊಂದು ಹುಚ್ಚು ಅಂದವರಿದ್ದಾರೆ. ಆದರೆ ದಿನ ಕಳೆದಂತೆ ಅದು ಅವಳ ಅಭ್ಯಾಸ ಎಂದು ಅರಿವಾದ ಮೇಲೆ ಅವರು ಕೂಡ ಅವಳ ದಾರಿ ಹಿಡಿಯುವುದಕ್ಕೆ ಆರಂಭ ಮಾಡಿದ್ದಾರೆ. ಅವಳಿಗೆ ಖುಷಿಯಿದೆ ತನ್ನ ಜೊತೆಗೆ ಬದುಕನ್ನ ಪ್ರೀತಿಸುವವರು ಇನ್ನೊಂದಷ್ಟು ಜನ ಸಿಕ್ಕಿದ್ದಾರಲ್ಲಾ ಅಂತ. ಆ ಬದುಕಿನಲ್ಲಿ ಅವಳಿಗೆ ನೋವಾಗಿದೆ, ಆದರೆ ನೋವಾದ ಕಾರಣಕ್ಕೆ ಬದುಕನ್ನ ದ್ವೇಷಿಸಿದವಳಲ್ಲ. ಅದಕ್ಕಿಂತ ಹೆಚ್ಚು ಪ್ರೀತಿಸಿ ಮುಂದುವರೆದಿದ್ದಾಳೆ. ಬದುಕನ್ನ ಪ್ರೀತಿಸಿ ಬದುಕಿದರೆ ನೋವು ನೋವಾಗಿರುವುದಿಲ್ಲ .ಅದು ಅವಳ ಅಭಿಮತ .ಆ ಬದುಕನ್ನ ಬದುಕೋಕೆ ಪ್ರಯತ್ನಿಸಬೇಕು ಅಂತ ನನಗ ಅನ್ನಿಸ್ತು ನಿಮಗೆ ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ