ಸ್ಟೇಟಸ್ ಕತೆಗಳು (ಭಾಗ ೪೦೧) - ಗಂಟೆ
ಈ ಸಮಯವನ್ನ ಏನು ಅಂತ ಹೇಳಬೇಕು ಗೊತ್ತಾಗ್ತಾ ಇಲ್ಲ? ನಾನು ಅವಳಿಗೆ ಕಾಯ್ತಾ ಇದ್ದೆ 11 ಗಂಟೆಗೆ ಬರುತ್ತೇನೆಂದಿದ್ದಳು. 10.30 ರಿಂದ 11 ಗಂಟೆಗೆ ಆಗಲಿಕ್ಕೆ ಒಂದು ದಿನವೇ ಕಳೆದುಹೋಯಿತು ಅನ್ನುವಷ್ಟು ನಿಧಾನವಾಗಿ ಮುಳ್ಳು ಚಲಿಸುತ್ತಿದೆ. ಎರಡೆರಡು ಸಲ ಸಮಯ ಪರೀಕ್ಷಿಸಿದೆ. ಮೊಬೈಲ್ನಲ್ಲಿ ಕೂಡ ನೋಡಿದೆ. ಇಲ್ಲ ಸಮಯ ಸರಿಯಾಗಿದೆ. ಜಗತ್ತಲ್ಲಿ ಎಲ್ಲರ ಸಮಯವು ಇಷ್ಟು ನಿಧಾನವಾಗಿ ಓಡ್ತಾ ಇದೆಯಾ ಅಥವಾ ನನ್ನ ಸಮಯ ಮಾತ್ರವಾ ಗೊತ್ತಾಗ್ತಾ ಇಲ್ಲ. ಅವಳು 11 ಗಂಟೆಗೆ ಬಂದ್ಲು. ಅವಳ ಬಳಿ ಕುಳಿತು ಮಾತು ಆರಂಭ ಮಾತನಾಡಬೇಕು ಅನ್ನುವಷ್ಟರಲ್ಲಿ ಗಂಟೆ ಒಂದಾಗಿತ್ತು. ಅವಳಿಗೆ ಹೊರಡಲೇ ಬೇಕಿತ್ತು. ಮಾತೇ ಆರಂಭಿಸಿರಲಿಲ್ಲ. ಈ ಗಂಟೆ ಅದ್ಯಾಕೆ ಅಷ್ಟು ವೇಗವಾಗಿ ಓಡಿದ್ದು. ನನ್ನ ಪ್ರಕಾರ ಈಗ ಸಮಯಕ್ಕೆ ನನ್ನ ಮೇಲೆ ಏನೋ ಹೊಟ್ಟೆ ಉರಿ. ನಾನು ಅವಳ ಬಳಿ ತುಂಬಾ ಹೊತ್ತು ಕುಳಿತುಕೊಳ್ಳಬಾರದು ಅಂತ ಆಸೆ ಕಾಣುತ್ತೆ. ನನಗೂ ಗಡಿಯಾರಕ್ಕೂ ಜಗಳ ಈ ವಿಚಾರದಲ್ಲಿ ಮಾತ್ರ. ಎಲ್ಲ ವಿಚಾರದಲ್ಲಿ ಅಲ್ಲ. ನಾನೊಂದು ಗಡಿಯಾರ ವಿರೋಧಿ ಸಂಘ ಕಟ್ಟಬೇಕು ಅಂತಿದ್ದೇನೆ. ಯಾರಿಗೆಲ್ಲ ಈ ಅನುಭವವಾಗಿದೆ ಜೊತೆಗೆ ಸೇರಿ ನಾವೊಂದು ಉಗ್ರ ಹೋರಾಟ ಮಾಡುವ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ