ಸ್ಟೇಟಸ್ ಕತೆಗಳು (ಭಾಗ ೪೦೮) - ಸಹ

ಸ್ಟೇಟಸ್ ಕತೆಗಳು (ಭಾಗ ೪೦೮) - ಸಹ

ಸಾಗುತ್ತಿರುವ ಜೀವನದ ದಾರಿಯನ್ನು ಬದಲಿಸಬಹುದು.... ಸಹಯಾನ.. ಸಹವಾಸ .....ಸಹವರ್ತಿಗಳಿಂದ..... ನನ್ನ ರೈಲಿನ ಪಯಣ ಊರಿನಿಂದ ಇನ್ನೊಂದು ಊರಿಗೆ ಹೊರಟಿತ್ತು. ಜೀವನದಲ್ಲಿ ಒಂದಷ್ಟು ನಿರ್ಧಾರಗಳು, ಯೋಚನೆಗಳು ಎಲ್ಲವನ್ನು ತುಂಬಿಕೊಂಡು ಕನಸುಗಳ ಕಡೆಗೆ ಪಯಣ ಆರಂಭವಾಗಿತ್ತು .

ಸಹಪ್ರಯಾಣಿಕನಾಗಿ ಸಹಯಾನವನ್ನು ಆರಂಭಿಸಿದವರು ಮಾತುಕತೆಗೆ ಇಳಿದ್ರು. ಮಾತನಾಡುತ್ತಾ, ಮಾತನಾಡುತ್ತಾ ನನ್ನೊಳಗಿನ ಇನ್ನೊಂದಷ್ಟು ಆಲೋಚನೆಗಳು ತೆರೆದುಕೊಳ್ಳಲು ಆರಂಭವಾದವು. ನಾನು ಪ್ರಯತ್ನಿಸಿದೇ ಇದ್ದ ಕ್ಷೇತ್ರವದು. ಅದಕ್ಕಾಗಿ ಒಂದಷ್ಟು ಜನರಿಗೆ ಕರೆ ಮಾಡಿದೆ. ಅವರು ನನ್ನ ಸಹವರ್ತಿಗಳು. ಅದಕ್ಕೆ ಇಂಬು ಕೊಡುವುದರ ಜೊತೆಗೆ ಇನ್ನೊಂದಿಷ್ಟು ಪೂರಕ ಮಾಹಿತಿಯೂ ಜೊತೆಯಾಯಿತು. ಹೆಜ್ಜೆ ಇಟ್ಟಾಯ್ತು. ಮುಂದುವರಿಯುತ್ತಿದ್ದ ಹಾಗೆ ಒಂದಷ್ಟು ಹೊಸ ಮನಸ್ಸುಗಳು ನನ್ನ ಬಳಿಗೆ ಬಂದವು. ಅವರ ಸಹವಾಸದಿಂದ ನನ್ನ ಗೆಲುವಿನ ದಾರಿ ಹತ್ತಿರವಾಯಿತು. ಸುಲಭದಲ್ಲಿ ಗೆಲುವು ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡಿತು. ಇವೆಲ್ಲವೂ ಸಾಧ್ಯವಾದದ್ದು ಸಹವಾಸ ಮತ್ತು ಸಹಯಾನದಿಂದ. ಅದೇ ರೈಲಿನ ಜೊತೆಗೆ ಪಯಣ ಮಾಡಿದ ಇನ್ನು ಹಲವರಿದ್ದರೂ ಅವರಿಗೆ ಸಹವರ್ತಿಗಳ, ಸಹಯಾನ, ಸಹವಾಸಗಳ ಪರಿಣಾಮವಾಗಿ ಗುರಿಯನ್ನು ತಲುಪುವುದಕ್ಕೆ ಆಗ್ತಾಯಿಲ್ಲ. ಇನ್ನೊಂದಷ್ಟು ಅಡೆತಡೆಗಳನ್ನು ಎದುರಿಸಿಕೊಂಡು ಅಲ್ಲೇ ಉಳಿದುಬಿಟ್ಟಿದ್ದಾರೆ. ಆಯ್ಕೆ ನಮ್ಮ ಕೈಲಿದೆ ಸಹವಾಸ ...ಸಹಯಾನ....ಸಹವರ್ತಿಗಳು ಯಾರೆಂಬುದು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ