ಸ್ಟೇಟಸ್ ಕತೆಗಳು (ಭಾಗ ೪೨೦) - ಗುಂಡಿ

ನಾನು ಒಂದಷ್ಟು ಸಮಯ ನಿಮಗೆ ಕಾಣಿಸಿರಲಿಲ್ಲ ಅಷ್ಟೇ. ಇಲ್ಲವಾದರೆ ಆಗಾಗ ನಿಮ್ಮ ಕಣ್ಣು ಮುಂದೆ ಪ್ರತ್ಯಕ್ಷವಾಗುತ್ತಾ ಇರುತ್ತೇನೆ. ನನ್ನ ನೆಚ್ಚಿನ ಆಗಮನದ ಸಮಯ ಈ ಮಳೆಗಾಲ. ಜೋರು ಮಳೆಯಲ್ಲಿ ನೀವೊಂದು ಗಾಡಿಯಲ್ಲಿ ರಸ್ತೆಯ ಮೇಲೆ ಚಲಿಸುತ್ತಿದ್ದರೆ ನನ್ನ ನೀವು ಖಂಡಿತ ನನ್ನ ಗುರುತಿಸುತ್ತೀರಿ. ಕೆಲವೊಂದು ಸಲ ನನ್ನ ಮೇಲೆ ಇನ್ನಷ್ಟು ರೇಗಿ ಮುಂದುವರೆಯುತ್ತೀರಿ. ನಾನು ಮಾಯವಾಗಲು , ಊರಿಗೆ ಯಾರಾದರೂ ದೊಡ್ಡವರು ಬರಬೇಕು. ರಾಜಕಾರಣಿಯೋ, ಚಲನಚಿತ್ರನಟನೋ, ನನ್ನ ಸಮಾಪ್ತಿ ಮಾಡಿ ರಸ್ತೆಯನ್ನು ಸುಂದರಗೊಳಿಸುವವರು ದೊಡ್ಡ ವೇದಿಕೆಯಲ್ಲಿ ಕುಳಿತು ಬಿಟ್ಟಿರುತ್ತಾರೆ.
ನಂತರ ಸಣ್ಣದೊಂದು ಮಳೆಗೆ ,ಸಣ್ಣ ಕಂಪನಕ್ಕೆ ನಾನು ಮತ್ತೆ ಬಾಯ್ತೆರೆದು ನಿಲ್ಲುವುದರಿಂದ ಪೂರ್ತಿಯಾಗಿ ತೊಲಗಿಸೋಕೆ ಸಾಧ್ಯವಿಲ್ಲ. ಯಾಕೆಂದರೆ ಎಲ್ಲಿಯವರೆಗೆ ದುಡ್ಡು ಅನ್ನೋದು ಕಿಸೆಯಲ್ಲಿ ತುಂಬಿಕೊಂಡು ಮನಸ್ಸಿನಲ್ಲಿ ಆಸೆಯನ್ನು ಹುಟ್ಟಿಸುತ್ತಿರುತ್ತದೋ ಅಲ್ಲಿಯವರೆಗೆ ನನ್ನ ನಾಶ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನನ್ನಿಂದಲೇ ಹಲವಾರು ಮನೆಗಳನ್ನು ಕಟ್ಟಿಕೊಂಡವರು, ಜೀವನವನ್ನೇ ಬದಲಾಯಿಸಿಕೊಂಡವರು ಇದ್ದಾರೆ. ನನಗೆ ನಿರ್ದಿಷ್ಟವಾದ ಆಕಾರವಿಲ್ಲ, ಸುತ್ತಳತೆಗಳಿಲ್ಲ, ವ್ಯಾಸ ಕೋನಗಳು ಯಾವುದು ಇಲ್ಲ. ನನಗೆ ನೀವು ನೀಡಿದ್ದೆ ಆಕಾರ. ದಿನಕಳೆದಂತೆ ದೊಡ್ಡವನಾಗುತ್ತಾ ಹೋಗುತ್ತೇನೆ ಹೊರತು ಸಣ್ಣವನಾಗುವುದಿಲ್ಲ. ನನಗೆ ಸಾವಿಲ್ಲ ಹಾಗಾಗಿ ನನಗಿಷ್ಟ ಬಂದಾಗ ಬರುತ್ತೇನೆ. ಎಲ್ಲೋ ಒಂದು ಕಡೆ ಇದ್ದವ ದಿನಕಳೆದಂತೆ ರಸ್ತೆಯ ತುಂಬೆಲ್ಲಾ ಆವರಿಸಿಕೊಳ್ಳುತ್ತೇನೆ. ಎಲ್ಲರೂ ನನ್ನವರೇ ಆಗಿಬಿಡಬೇಕು ಅಥವಾ ಎಲ್ಲಾ ಕಡೆಯೂ ನಾನೇ ಇರಬೇಕು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ