ಸ್ಟೇಟಸ್ ಕತೆಗಳು (ಭಾಗ ೪೨೧) - ಒಡಲು

ದಡದ ಮೇಲೆ ಉರುಳಾಡುತ್ತಿರುವ ಅಲೆಗಳಿಗಿಂತ ಆಳ ಸಮುದ್ರದ ತಣ್ಣಗಿನ ಶಾಂತ ಸಮುದ್ರ ತುಂಬಾ ಭೀಕರವಾಗಿರುವುದಂತೆ. ನಿನ್ನೆ ಸಮುದ್ರ ದಡದಲ್ಲಿ ಕೂತಿದ್ದೆ. ತೀರಕ್ಕೆ ಬಂದು ಬಡಿಯುತ್ತಿರುವ ಅಲೆಗಳು ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದವು. ಒಂದರ ಮೇಲೊಂದರಂತೆ ಬರುತ್ತಾ ನೊರೆಗಳನ್ನು ಎಬ್ಬಿಸುತ್ತಾ ಒಂದಷ್ಟು ಮರಳುಗಳನ್ನು ತಮ್ಮ ಒಡಲಿಗೆ ತೆಗೆದುಕೊಂಡೊಯ್ದವು. ಹಾಗೆಯೇ ಕಲ್ಲುಬಂಡೆಯ ಮೇಲೆ ನಿಂತು ದೂರಕ್ಕೆ ಕಣ್ಣು ಹಾಯಿಸಿದಾಗ ದೂರದ ಸಮುದ್ರ ಒಂದಷ್ಟು ಶಾಂತವಾಗಿತ್ತು. ಯಾವುದೇ ಅಲೆಗಳನ್ನು ಕಳುಹಿಸುತ್ತಲೇ ಇರಲಿಲ್ಲ. ಆಗ ನನಗನಿಸಿದ್ದು ತೀರಕ್ಕೆ ಬಂದು ಬಡಿಯುತ್ತಿರುವ ಅಲೆಗಳೇ ತುಂಬಾ ಭಯವನ್ನುಂಟು ಮಾಡುತ್ತಿವೆ. ಮಧ್ಯದ ಸಾಗರ ಒಂದಷ್ಟು ಮೌನವಹಿಸಿದೆ. ಇದು ಹೌದಾಗಿರಬಹುದೆಂದೆನಿಸಿ ಮೀನು ಹಿಡಿಯುವ ಒಬ್ಬರನ್ನು ಕೇಳಿದ್ದಕ್ಕೆ ನೀನು ಅಂದುಕೊಂಡಿರುವುದು ತಪ್ಪು, ತೆರೆಗಳು ಸುಮ್ಮನೆ ಹಾರಾಡುತ್ತವೆ. ಅವುಗಳ ಮುಂದೆ ಈಜಬಹುದು ಆದರೆ, ಈ ಶಾಂತವಾಗಿದ್ದು ಅಗಾಧವಾದ ಶಕ್ತಿಯನ್ನು ಒಡಲಲ್ಲಿ ಹೊಂದಿರುವ ಸಾಗರವನ್ನು ಮುಟ್ಟುವುದು ಅತ್ಯಂತ ಕಠಿಣ. ಶಾಂತವಾಗಿರುವವರ ಒಡಲಿನೊಳಗೆ ಭೀಕರತೆ, ಬಲಾಢ್ಯ ಶಕ್ತಿ ಅರಿವು ನಮಗಿಲ್ಲ. ಹಾಗಾಗಿ ಎದುರಿನಿಂದ ನೋಡಿ ನಿರ್ಧಾರಕ್ಕೆ ಬರಬೇಡ ಅಂತ ಹೇಳಿ ಮುನ್ನಡೆದು ಬಿಟ್ಟರು. ಶಾಂತವಾಗಿದ್ದಾರೆ ಅಂದರೆ ಶಕ್ತಿ ಇಲ್ಲಾ ಅಂತ ಅಲ್ಲ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ