ಸ್ಟೇಟಸ್ ಕತೆಗಳು (ಭಾಗ ೪೨೨) - ಬದುಕಿನ ಛಲ

ಜೊತೆಗಿದ್ದ ಕುಟುಂಬವು ಆಸ್ತಿಯ ವಿಚಾರಕ್ಕಾಗಿ ಊರು ಬಿಡಬೇಕಾಯಿತು. ದೂರದೂರಿಗೆ ಬಂದು ನೆಲೆಸಿದಾಗ ಬದುಕಿನ ಅನಿವಾರ್ಯತೆಗೆ ಬಾಡಿಗೆ ಅಂಗಡಿ ಪಡೆದು ದಿನ ದೂಡಿದರು. ಮನೆಯ ತಾಯಿಗೆ ಕೆಲಸವೊಂದು ಗಟ್ಟಿ ಇದ್ದದ್ದರಿಂದ ಮಕ್ಕಳ ಓದು ಊಟ ನೆಮ್ಮದಿಯ ನಿದ್ದೆ ಸಾಗುತ್ತಲಿತ್ತು. ಬದುಕು ಹಾಗೆ ಇರೋದಿಲ್ಲ, ಬದಲಾಗುತ್ತಿರುತ್ತದೆ. ಇದ್ದ ಬಾಡಿಗೆ ಮನೆಯನ್ನು ಬದಲಿಸಬೇಕೆಂಬ ಕಾರಣಕ್ಕೆ ಸತಿ ಪತಿಗಳಿಬ್ಬರೂ ದುಡಿಮೆಗೆ ಸ್ವಲ್ಪ ಹೆಚ್ಚಿನ ಸಮಯವನ್ನು ಮೀಸಲಿಟ್ಟರು. ಕೆಲಸಗಳ ಒತ್ತಡದ ನಡುವೆ ಅಂಗಡಿಗೆ ಬರುವವರ ಸಂಖ್ಯೆ ಕಡಿಮೆಯಾದಾಗ ಮುಂದೇನು ಅನ್ನುವ ಪ್ರಶ್ನೆಗಳು ಹಾಗೆ ಹುಟ್ಟಿಕೊಂಡವು? ಆರೋಗ್ಯವು ಕೈಕೊಡುತ್ತಿತ್ತು. ಮನೆ ಮಗಳಿಗೆ ಓದು ಮುಗಿಸಿ ಕೆಲಸವೊಂದು ಸಂಪಾದಿಸಿ ಮನೆಯವರ ಮುಖದಲ್ಲೊಂದು ನೆಮ್ಮದಿಯ ನಗುವನ್ನ ಕಾಣಿಸೋಕೆ ಆಸೆ. ಅದಕ್ಕೂ ಒಂದಷ್ಟು ಸಮಯವಿದೆ. ಮಕ್ಕಳ ಓದಿಗೆ ಕೆಲವೊಂದು ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳ ಪಟ್ಟಿ ಬೆಳೆಯುತ್ತಿದೆ. ದಿನವೂ ದುಡಿಮೆ ಬದುಕಿನ ಉತ್ಸಾಹ ಕಡಿಮೆಯಾಗಲೇ ಬಾರದು ಅದಕ್ಕಾಗಿಯಾದರೂ ಈ ಸಾಲಗಳು ಹೀಗೆ ಇರಬೇಕು ಅನ್ನುತ್ತಾರೆ ಆ ಮನೆಯವರು. ಮಕ್ಕಳಿಬ್ಬರಿಗೂ ಬದುಕಿನ ಅವಶ್ಯಕತೆ ಪ್ರಸ್ತುತ ಸ್ಥಿತಿಯನ್ನು ತಂದೆ-ತಾಯಿಗಳು ಹೇಳಿರುವುದಕ್ಕೆ ಮಕ್ಕಳಿಬ್ಬರಿಗೂ ಬದುಕಿನ ಜವಾಬ್ದಾರಿಯ ನೆನಪಿದೆ. ತಂದೆತಾಯಿಗಳು ತಮ್ಮ ಜೀವನವನ್ನು ಮಕ್ಕಳ ಮುಂದೆ ತೆರೆದಿಟ್ಟಾಗ ಮಾತ್ರ ಮಕ್ಕಳಿಗೂ ಬದುಕಿನ ಮಜಲುಗಳು ಕಣ್ಣಮುಂದೆ ಕಾಣಿಸತೊಡಗುತ್ತದೆ. ಆಗ ವರ್ತಮಾನದಲ್ಲಿ ಬದುಕುವ ಛಲ ಹೆಚ್ಚಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ