ಸ್ಟೇಟಸ್ ಕತೆಗಳು (ಭಾಗ ೪೩೧) - ಅಷ್ಟೇ
ಬೆಳಿಗ್ಗೆ ಚಾಪೆಯಿಂದ ಎದ್ದಾಗ ಮನೆಯವರ ಮುಖ ಕಾಣುವುದಿಲ್ಲ. ಕರೆ ಮಾಡಿದಾಗ ಭಾವನೆಗಳಿಂದ ಅವರು ಹೀಗಿರಬಹುದು ಅನ್ನುವ ಯೋಚನೆಗಳು ಮಾತ್ರ ಕಾಡುತ್ತದೆ. ಬೇಕಾದ್ದನ್ನೆಲ್ಲ ಮಾಡಿಕೊಳ್ಳೋಕೆ ಮನೆಯಂತಹ ಬಾಂಧವ್ಯ ಇಲ್ಲಿರುವುದಿಲ್ಲ. ಹಬ್ಬಹರಿದಿನಗಳು ನೆನಪುಗಳಲ್ಲಿ, ಮಾತುಗಳಲ್ಲಿ, ಮೊಬೈಲ್ ಸ್ಟೇಟಸ್ ಗಳಲ್ಲಿ, ಮಾತ್ರ. ತುಂಬಾ ನೋವಾದಾಗ ಅಳಬೇಕು ಅನ್ನಿಸಿದಾಗ ಸಾಂತ್ವನ ಹೇಳಿ ಕೈ ಹಿಡಿದು ಜೊತೆಗೆ ನಿಲ್ಲುವವರು ಇಲ್ಲದೆ ನಮಗೆ ನಾವೇ ಸಮಾಧಾನ ತಂದುಕೊಂಡು, ಆಗಾಗ ತಲೆ ದಿಂಬುಗಳನ್ನು ತೋಯಿಸಿಕೊಂಡು ಮತ್ತೆ ತಣ್ಣೀರಲ್ಲಿ ಮುಖ ತೊಳೆದು ದಿನದ ಆರಂಭಕ್ಕೆ ಮತ್ತೆ ತಯಾರಾಗೋದು. ಅನಾಮಧೇಯ ಊರಿನಲ್ಲಿ ಬದುಕು ಕಟ್ಟಿಕೊಳ್ಳಲು ಓಡಾಡುತ್ತಲೇ ಇರುತ್ತೇವೆ. ಎಲ್ಲವನ್ನು ಬಿಟ್ಟು ಊರು ಸೇರೋಣ ಅಂತಂದ್ರೆ ಬದುಕು ಅಷ್ಟು ಸುಲಭವಲ್ಲ. ಸದ್ಯ ಬದುಕಿರುವ ಊರಿಗೆ ಮನೆಯವರನ್ನ ಕರೆಸಿಕೊಳ್ಳುವವೆಂದರೆ ಈ ದುಡ್ಡಲ್ಲಿ ಅದು ಸಾಧ್ಯವೂ ಇಲ್ಲ. ಹಾಗಾಗಿಯೇ ಬದುಕಬೇಕು. ಮುಂದೊಂದು ದಿನ ಬದಲಾಗುವ ಬದುಕಿನ ಕುರಿತು ಯೋಚಿಸಿಕೊಂಡು ನಿಡಿದಾದ ಉಸಿರು ಬಿಟ್ಟು ದಿನವು ಬದುಕಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ