ಸ್ಟೇಟಸ್ ಕತೆಗಳು (ಭಾಗ ೪೩೨) - ಹಣ-ಭಾವ

ಸ್ಟೇಟಸ್ ಕತೆಗಳು (ಭಾಗ ೪೩೨) - ಹಣ-ಭಾವ

ನಾವು ಹಿಡಿದುಕೊಂಡಿರುವ ಕಾಗದ ತುಂಡಿಗೆ ಇಷ್ಟೊಂದು ಮೌಲ್ಯ ಇದೆ ಎನ್ನುವುದು ಅದನ್ನು ಬಳಸುತ್ತಿರುವವರಿಗೆ ಮಾತ್ರ ಗೊತ್ತಿರುವುದು. ಅದರೊಂದಿಗೆ ಸಂಬಂಧವನ್ನು ಹೊಂದಿ ದಿನವೂ ವ್ಯವಹರಿಸುವವರು ಮಾತ್ರ ಅದು ಇನ್ನಷ್ಟು ತುಂಬಲು ಎಂದು ಬಯಸುತ್ತಾರೆ. ಇವತ್ತೂ ನಮ್ಮ ಅಂಗಡಿಯ ಮುಂದೆ ನಿಂತಿರುವ ಎರಡು ನಾಯಿಗಳು ಬೆಳಗ್ಗೆಯಿಂದ ನಮ್ಮನ್ನೇ ಗಮನಿಸುತ್ತಿದ್ದಾವೆ. ಏನಾದ್ರೂ ತಿನ್ನೋದು ಸಿಗುತ್ತಾ ಅಂತ. ನಾನು ಇಷ್ಟರವರೆಗೆ ಮೌಲ್ಯಯುತ ಕಾಗದ ತುಂಡು ನೀಡದೆ ಇದ್ದವರಿಗೆ ಏನು ನೀಡಿದವನಲ್ಲ, ನಾನಾಗಿ ಉಚಿತವಾಗಿ ಅಲ್ಲಿಂದ ಏನು ತೆಗೆದುಕೊಂಡು ಹೋಗುತ್ತಿದ್ದವನೂ ಅಲ್ಲ. ಹಾಗಿರುವಾಗ ನಾಯಿಗಳಿಗೆ ನಾನೇಕೆ ನೀಡಲಿ. ಅವುಗಳು ದುಡ್ಡು ತಂದುಕೊಟ್ಟರೆ ನೀಡುವ ಅನ್ನುವ ನಿರ್ಧಾರದಲ್ಲಿ ನಾನು ನಿಂತಿದ್ದೇನೆ. ನಾಯಿಗಳಿಗೆ ಇನ್ನೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ಕಾಗದ ತುಂಡು ಇಲ್ಲದೆ ಬದುಕು ಸಾಧ್ಯವಿಲ್ಲ. ಅಂಗಡಿಯ ಮುಂದೆ ಸುಮ್ಮನೆ ಕೂತರೆ ಯಾರು ತಿನ್ನೋಕೆ ಆಗುವುದಿಲ್ಲ. ಅದಕ್ಕೆ ಕಾಗದ ತುಂಡುಗಳನ್ನು ನೀಡಲೇಬೇಕು. ಅನ್ನೋ ಅರಿವಿಲ್ಲದೆಯೇ ಬೆಳಗ್ಗಿನಿಂದ ತಲೆ ಎತ್ತಿಕೊಂಡು ಡಬ್ಬಿಯ ಒಳಗೆ ಇಟ್ಟಿದ್ದ ತಿಂಡಿಗಳನ್ನು ತದೇಕ ದೃಷ್ಟಿಯಿಂದ ನೋಡುತ್ತಿದ್ದಾವೆ. ಅಂಗಡಿಗೆ ಬಂದ ಯಾರೋ ಪುಣ್ಯಾತ್ಮ ಅವನು ಬಿಸ್ಕೆಟ್ ತೆಗೆದುಕೊಂಡಾಗ ಇದ್ದ ಎರಡು ತುಂಡುಗಳನ್ನು ನಾಯಿಗಳಿಗೆ ಹಾಕಿದ. ಆಹಾರವನ್ನು ತಿನ್ನುವುದು ಬಿಟ್ಟು ತನಗೇ ಸಿಗಬೇಕು ಅನ್ನೋ ಕಾರಣಕ್ಕೆ ಸಣ್ಣ ಜಗಳ ಆರಂಭವಾಯಿತು. ಜಗಳ ಸ್ವಲ್ಪ ದೊಡ್ಡ ಮಟ್ಟಕ್ಕೆ ಹೋಯಿತು. ಕೆಲವೇ ಕ್ಷಣಗಳಲ್ಲಿ 2 ಹೇಗೋ  ಸಿಕ್ಕಿದಷ್ಟು ತಿಂದುಕೊಂಡು ಮತ್ತದೇ ಹಸಿವೆಯಿಂದ ಇನ್ಯಾರದ್ದೋ ಮುಖ ನೋಡುತ್ತಾ ನಿಂತವು. ಮತ್ಯಾರೋ ಹಾಕಿದರು ಮತ್ತೆ ಜಗಳ ಮತ್ತೆ ಹಸಿವು ಮತ್ತೆ ಮುಖ ನೋಡೋದು ಇದು ಮುಂದುವರೆದು ಮುಂದುವರೆದು ಹೊಟ್ಟೆ ತುಂಬಿದ ತಕ್ಷಣ ಮತ್ತೆ ಗೆಳೆಯರಾಗಿ ಮತ್ತೆಲ್ಲಿಗೋ ಹೊರಟುಹೋದವು. ನಾಯಿಗಳಿಗೆ ಬದುಕಿನ ಅವಶ್ಯಕತೆ ಏನು ಅಂತ ಗೊತ್ತಿದೆ. ಸಂಬಂಧಗಳನ್ನು ಉಳಿಸಿಕೊಳ್ಳುವುದು ಗೊತ್ತಿದೆ. ಜೀವನಪೂರ್ತಿ ಕೋಪ ಇಟ್ಟುಕೊಂಡು ವೈರಿಗಳ ಆಗುವ ಮನಸ್ಸು ನಾಯಿಗಳಿಗೆ ಇಲ್ಲ. ಮತ್ತೆ ನಮಗೆ ಯಾಕಿರೋದು ...?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ