ಸ್ಟೇಟಸ್ ಕತೆಗಳು (ಭಾಗ ೪೩) - ಬೇಲಿಗಳು
ಸೂರ್ಯನಿಗೆ ದಿನದ ವೃದ್ಧಾಪ್ಯ ಹಿಡಿದಿತ್ತು ನನ್ನ ಪಕ್ಕದಲ್ಲಿ ಕುಳಿತ ಅಜ್ಜನ ಹಾಗೆ. ಗಂಟಲು ಮಾತುಗಳನ್ನು ತಡೆದು ಹೊರ ಕಳುಹಿಸುತ್ತಿತ್ತು." ಬಾಬೂ ನಾನು ಊರಿಗೆ ಬಂದಾಗ 'ಬೇಲಿಗಳು' ಎನ್ನುವ ವಿಚಾರವೇ ಇರಲಿಲ್ಲ. ಮತ್ತೆ ಒಮ್ಮೆ ಆಡಿದ ಮಾತಿನ ಮೇಲೆ ಎಲ್ಲರೂ ನಿಲ್ಲುತ್ತಿದ್ದರು. ನಾನು ಇಲ್ಲಿ ನೆಲೆಸುತ್ತೇನೆ, ಈ ಗದ್ದೆ ನಾನು ನೋಡ್ಕೋತೇನೆ, ಅದನ್ನ ನೀನು ನೋಡಿಕೋ ಅಂದರೆ ಮುಗಿಯಿತು ಅದು ಅವರದ್ದೇ. ಮನೆ ಪಕ್ಕ ಇನ್ನೊಬ್ಬ ಮನೆ ಕಟ್ಟುತ್ತೇನೆ ಅಂದಾಗ ಹು ಅನ್ನುತ್ತಿದ್ದೆವು. ಎರಡು ಮನೆಗೂ ಯಾವುದೇ ಬೇಲಿಯೇ ಇರಲಿಲ್ಲ. ನಾನು ತುಂಬಾ ಸಂಪಾದಿಸಬೇಕು ಅನ್ನುವ ಯಾವ ಆಸೆಯೂ ಇರಲಿಲ್ಲ. ದಿನವೂ ಬದುಕಬೇಕು ಅನ್ನೋದೊಂದೇ ದೊಡ್ಡ ಆಸೆ ನಮಗಿದ್ದದ್ದು. ಈಗ ಬೇಲಿಯೇ ಮೊದಲು ನಂತರ ಮನೆ ಕಟ್ಟುವುದು. ಹೀಗಿದ್ದಾಗ ಮನಸ್ಸು ಕಟ್ಟುವುದು ಹೇಗೆ? ಒಂದಿಂಚಿಗೂ ಕತ್ತಿ ದೊಣ್ಣೆ ಹಿಡ್ಕೋತ್ತೀರಲ್ಲಾ ಯಾಕೆ? ಬಾಬೂ ಅವರನ್ನ ಸುಮ್ನಿರೋಕೆ ಹೇಳು".
ಹೊರಗಡೆ ಮಾವಂದಿರ ಜಗಳ ತಾರಕಕ್ಕೇರಿತ್ತು. ಅಂಗಳದ ಎರಡೂ ತುದಿಗಳಲ್ಲಿ ಮನೆಕಟ್ಟಿಕೊಂಡು ಅಂಗಳದಲ್ಲಿ ಹಾಕಿದ ಅಡಕೆಗೆ 'ಇದು ನನ್ನ ಅಂಗಳಕ್ಕೆ ಬರಬಾರದು' ಎನ್ನುವ ವಿಚಾರಕ್ಕೆ ಜಗಳ ದೊಡ್ಡದಾಗಿತ್ತು. ಅಜ್ಜ ನನ್ನ ಕೈ ಹಿಡಿದು ಕಣ್ಣಲ್ಲಿ ನೀರು ತುಂಬಿ ಮಾತು ನಿಲ್ಲಿಸಿದರು. ಮಾವಂದಿರ ಜಗಳ ನಿಲ್ಲುತ್ತಿಲ್ಲ. ಸೂರ್ಯ ವೃದ್ಧಾಪ್ಯದಿಂದ ಸಾವಿನ ದವಡೆಗೆ ಜಾರಿದ ಮರುದಿನ ಹುಟ್ಟುತ್ತೇನೆ ಅನ್ನುವ ನಂಬಿಕೆಯಿಂದ. ಆದರೆ ಅಜ್ಜ......?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ