ಸ್ಟೇಟಸ್ ಕತೆಗಳು (ಭಾಗ ೪೪೩) - ಭಾರತ
ನವೀನನ ಜೊತೆ ಭಾರತದ ದೊಡ್ಡ ಚಿತ್ರವೊಂದನ್ನು ಕಾಲೇಜಿನ ಮೈದಾನದಲ್ಲಿ ಬಿಡಿಸುತ್ತಿದ್ದೆ. ನಾನು ಶಾಲೆಯಲ್ಲಿ ಪರೀಕ್ಷೆಗೆ ಭಾರತದ ಚಿತ್ರ ಬಿಡಿಸುವಾಗ ಪೆನ್ಸಿಲ್ ಗಿಂತ ಹೆಚ್ಚು ರಬ್ಬರ್ ಬಳಕೆಯನ್ನೇ ಮಾಡುತ್ತಿದ್ದೆ. ನವೀನ ತುಂಬಾ ಸಲೀಸಾಗಿಯೇ ಭಾರತವನ್ನ ಚಿತ್ರಿಸಿದ. ಚಿತ್ರ ಬಿಡಿಸುವಾಗ ಒಂದೆರಡು ಕಡೆ ಸಣ್ಣ ತಪ್ಪುಗಳಾದಾಗ ನಾನಂದೆ "ಅದು ಹಾಗೇ ಇರಲಿ, ದೊಡ್ಡದಾಗಿ ಮಾಡುವಾಗ ಅದು ಗೊತ್ತಾಗುವುದಿಲ್ಲ" ಅದಕ್ಕೆ ನವೀನ ಹೇಳಿದ "ಇಲ್ಲ ಸರ್, ಬಿಡಿಸ್ತಾ ಇರೋದು ಭಾರತ ಚಿತ್ರ. ಎಲ್ಲೂ ಯಾವುದಕ್ಕೂ ಕುಂದು ಅನ್ನಿಸಬಾರದು. ಅದು ನನ್ನ ದೇಶ." ಹೀಗಂದು ಭಾರತಕ್ಕೆ ಪರಿಧಿಗಳನ್ನು ಎಳೆಯುತ್ತಾ ಹೋದ.
ನಾನು ಅದೇ ಪರಿಧಿಯನ್ನು ಮತ್ತೆ ಇನ್ನಷ್ಟು ಗುರುತು ಸರಿಯಾಗಿ ಕಾಣುವ ಹಾಗೆ ಇನ್ನೊಂದಷ್ಟು ಆಳವಾಗಿ ಚಿತ್ರಿಸಿದೆ. ನನ್ನದೇನೂ ಕಷ್ಟದ ಕೆಲಸವಾಗಿರಲಿಲ್ಲ. ನಾನು ಅವನನ್ನ ಅನುಸರಿಸಬೇಕಿತ್ತು ಅಷ್ಟೇ. ಇಲ್ಲಿ ಯೋಚನೆ ಮಾಡಿ ಕೆಲಸ ಮಾಡಬೇಕಾಗಿದ್ದು ನವೀನನ ಕೆಲಸ. ಅವನು ಸುಂದರವಾಗಿಯೇ ಭಾರತವನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟ .
ಹಾಗೆ ಅಲ್ವಾ ಭಾರತ ನಿರ್ಮಾಣ ಆಗುವಾಗ ಭಾರತ ಭಾರತವಾಗಿ ನಿಲ್ಲಬೇಕು ಅಂತಿದ್ರೆ ಹಲವಾರು ಮಹಾನ್ ಚೇತನಗಳು ಅದರ ಮುಂದೆ ದುಡಿದಿದ್ದಾರೆ. ನಾವು ಅವರು ದುಡಿಮೆಯನ್ನು ಹಾಳುಮಾಡದೆ ನಮ್ಮದು ಒಂದಷ್ಟು ಸಣ್ಣಪುಟ್ಟ ಕೊಡುಗೆಗಳನ್ನು ಸೇರಿಸಿ ಭಾರತವನ್ನು ಇನ್ನಷ್ಟು ಎತ್ತರಕ್ಕೇರಿಸುವ ಕೆಲಸವನ್ನ ಮಾಡಬೇಕೇ ಹೊರತು ಮತ್ತೆ ಕೆಳಗಿಳಿಸುವುದಲ್ಲ ಗೆರೆ ಅಳಿಸುವುದಲ್ಲ ...ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ