ಸ್ಟೇಟಸ್ ಕತೆಗಳು (ಭಾಗ ೪೪೫) - ಅವರು

ಸ್ಟೇಟಸ್ ಕತೆಗಳು (ಭಾಗ ೪೪೫) - ಅವರು

ಕೆಲವೊಮ್ಮೆ ಪರಿಸ್ಥಿತಿಗಳು ಕನಸುಗಳನ್ನು ನಿರ್ಧರಿಸುತ್ತದೆ ಅಥವಾ ಕನಸುಗಳಿಂದ ಪರಿಸ್ಥಿತಿ ಬದಲಾಗುತ್ತದೆ. ಅವರು ಕನ್ನಡಕವನ್ನು ಧರಿಸಿ ಆಗಿತ್ತು. ಅದರಲ್ಲಿ ತುಂಬಾ ಸ್ಪಷ್ಟವಾಗಿ ಒಂದಷ್ಟು ದೂರದ ಹಾದಿ ಕೂಡ ಕಾಣುತ್ತಿತ್ತು. ಆದರೆ ಜೊತೆಯಿದ್ದವರಲ್ಲಿ ಅದೇ ಕನ್ನಡಕ ಇರಬೇಕೆಂದೇನೂ ಇಲ್ಲ. ಅವರ ಕನ್ನಡಕಗಳು ಬದಲಾಗಿರುತ್ತದೆ. ಹಾಗಿದ್ದಾಗ ಕಾಣುವ ದೃಷ್ಟಿಗಳೇ ಬೇರೆಯಾಗಿರುತ್ತದೆ. ಹಲವಾರು ಜನ ದಾರಿ ತಪ್ಪಿದೆ ಅಂತಂದ್ರು, ಆದರೆ ಅವರು ಕನ್ನಡಕವನ್ನು ಬದಲಿಸಿ ಬೇರೆಯದನ್ನು ಧರಿಸಿಕೊಳ್ಳುವ ಪ್ರಮೇಯಕ್ಕೆ ಹೋಗಲಿಲ್ಲ. ಇವರಿಗೆ ತುಂಬ ಸ್ಪಷ್ಟವಾಗಿದ್ದು ತುಂಬಾ ದೂರದವರೆಗೂ ಕಾಣುತ್ತಿತ್ತು. ಆದರೆ ಏಕಾಂಗಿ ಪಯಣ ಸಾಧ್ಯವಿಲ್ಲ ಒಂದಷ್ಟು ದೂರದವರೆಗೆ ಒಬ್ಬನೇ ನಡೆದು ಮುಂದೆ ಜೊತೆಗಾರರು ಇದ್ದಾಗ ಕನ್ನಡಕದ ದೂರವನ್ನು ತಲುಪಬಹುದು ಅನಿಸ್ತು. ಕನ್ನಡಕವನ್ನು ಒರಸಿ ಸರಿಯಾಗಿ ದಾರಿ ನೋಡಿಕೋ ಅಂತ ಅಂದವರು  ಬಹಳ. ಅವರ ಕನ್ನಡಕದ ಸ್ಪಷ್ಟತೆ ಹಲವರಿಗೆ ಅರಿವಿರಲಿಲ್ಲ. ಹೊಸ ಹೊಸ ಕನ್ನಡಕಗಳು ಚಾಲ್ತಿಯಲ್ಲಿದ್ದರೂ ಅವುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಇವರು ತಾವು ಧರಿಸಿದ ಕನ್ನಡಕವನ್ನು ಬದಲಾಯಿಸಿಕೊಂಡು ಅದರ ಕಡೆಗೆ ಆಕರ್ಷಿತರಾಗಿಲ್ಲ. ನಾವು ನಮ್ಮದೇ ಕನ್ನಡಕವನ್ನು ಧರಿಸಿ ಅವರ ದಾರಿಯನ್ನು ನೋಡೋದಕ್ಕಾಗುವುದಿಲ್ಲ.ಅಲ್ಲದೇ ಹಾಗೆ ಮಾಡಿದರೆ ನಮಗೆ ಆ ದಾರಿಯ ಅರಿವೇ ಇರುವುದಿಲ್ಲ ಅಥವಾ ಸಾಗುವ ದೂರವು ಗೊತ್ತಿರುವುದಿಲ್ಲ. ಅವರ ಕನ್ನಡಕ ನಮ್ಮ ಕಣ್ಣಿಗೆ ಹೊಂದಾಣಿಕೆಯಾಗುವುದಿಲ್ಲ. ಮಾಡಬೇಕಾಗಿರುವುದಿಷ್ಟೇ ಅವರ ಬಲು ದೂರದ ಹಾದಿಯಲ್ಲಿ ಸಣ್ಣ ಸಣ್ಣ ಮೈಲುಗಲ್ಲುಗಳನ್ನು ನಾವು ಸಾಗುತ್ತಾ ಮುಂದುವರಿಯಬೇಕು, ಅದು ದೊಡ್ಡ ದೂರವನ್ನು ತಲುಪಿಸಿ ಬಿಡುತ್ತದೆ. ವರುಷಗಳು ಕಳೆದು ಸೋಲು-ಗೆಲುವು ಪಾಠ ಸಮಸ್ಯೆ ಎಲ್ಲವನ್ನು ಅನುಭವಿಸಿಕೊಂಡು ಇನ್ನೊಂದಷ್ಟು ಹೊಸವರ್ಷದಲ್ಲಿ ಹೊಸ ದಾರಿಗಳನ್ನು ಕಂಡುಕೊಂಡು ತಮ್ಮ ದೃಷ್ಟಿಯ ಗುರಿ ಕಡೆಗೆ ಆದಷ್ಟು ಬೇಗ ತಲುಪಲಿ ಎಂದು ಆಶಿಸಿ ಬೇಕಷ್ಟೇ ನಾವು..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ