ಸ್ಟೇಟಸ್ ಕತೆಗಳು (ಭಾಗ ೪೭೨) - ಯಾವಾಗ?
ಹಬ್ಬ ಅಂದರೆ ಭಯವಾಗಿದೆ. ಇದು ಮಧ್ಯಮ ವರ್ಗದವರಿಗೆ ಮಾತ್ರ. ದುಡ್ಡಿರುವ ದೊಡ್ಡ ಮನುಷ್ಯರು ಹಬ್ಬ ಅಂದ್ರೆ ಈ ಸಲ ಎಲ್ಲಿ ಚಿನ್ನ ಖರೀದಿಸುವುದು, ಯಾವ ತರಹದ ಚಿನ್ನವನ್ನು ಖರೀದಿಸಬಹುದು, ಯಾವುದರಲ್ಲಿ ಹೊಸ ವಿನ್ಯಾಸ ಬಂದಿದೆ, ಬಟ್ಟೆಗಳನ್ನು ಖರೀದಿಸುವುದು ಎಲ್ಲಿ? ಈ ಸಲ ಹಬ್ಬಕ್ಕೆ ಮನೆಗೆ ಉಡುಗೊರೆ ಏನು? ಹೀಗೆಲ್ಲ ಯೋಚನೆ ಮಾಡುವುದು ಸಹಜ. ಆದರೆ ಮಧ್ಯಮ ವರ್ಗದ ಜೀವನ ಹಾಗಲ್ಲ ಈ ಸಲದ ಹಬ್ಬಕ್ಕಾದರೂ ಅಮ್ಮನ ಕಿವಿಯೋಲೆಯನ್ನು ಬಿಡಿಸಬೇಕು, ತಂಗಿಯ ಸರವನ್ನು ಬ್ಯಾಂಕಿನಿಂದ ತರಬೇಕು, ಅಮ್ಮನ ತುಂಡಾದ ಕರಿಮಣಿಯನ್ನ ಸರಿ ಮಾಡಿಸಬೇಕು,ಈ ಸಲದ ಹಬ್ಬದ ದಿನ ಮನೆಯ ಚಿನ್ನ ಬ್ಯಾಂಕಿನಲ್ಲಿ ಇರೋದು ಮತ್ತೆ ಮನೆಗೆ ಬರಬೇಕು ಅದಕ್ಕಾಗಿ ದುಡ್ಡು ಹೊಂದಿಸುವುದು ಹೇಗೆ? ಆಲೋಚನೆ ಅವರವರ ಪರಿಸ್ಥಿತಿಗೆ ಅವರವರ ಯೋಚನೆಗಳು ಮುಂದುವರೆಯುತ್ತದೆ. ಆರಕ್ಕೇರದ ಮೂರಕ್ಕಿಳಿಯದ ಬದುಕು, ದೊಡ್ಡ ಕನಸುಗಳು, ಹೆಚ್ಚಾಗುವ ಜವಾಬ್ದಾರಿಗಳು ಇದರ ನಡುವೆ ಮಧ್ಯಮವರ್ಗದ ಬದುಕು ಮಾತ್ರ ಹೈರಾಣಾಗಿರುತ್ತದೆ.
ಮುಂದಿನ ಸಾಲಿನಲ್ಲಿದ್ದ ಕನಸುಗಳೆಲ್ಲವೂ ಹಿಂದಿನ ಸಾಲಲ್ಲಿ ಬಂದು ನಿಂತು ಜವಾಬ್ದಾರಿಗಳು ಮುಂದಿನ ಸಾಲಿನಲ್ಲಿ ನಡೆಯುವುದಕ್ಕೆ ಆರಂಭವಾಗುತ್ತದೆ. ಅದು ಯಾವತ್ತೂ ಸಂಧಿಸುವುದೇ ಇಲ್ಲ. ಕನಸುಗಳು ಮುಂದೆ ಹೆಜ್ಜೆ ಇಡುವ ದಿನಗಳಿಗೆ ಮಧ್ಯಮವರ್ಗದ ಮನಸ್ಸುಗಳು ಕಾಯುತ್ತವೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ