ಸ್ಟೇಟಸ್ ಕತೆಗಳು (ಭಾಗ ೪೭೫) - ಮುಳ್ಳು
"ಓ ಮುಳ್ಳೇ ನೀನೇಕೆ ದಾರಿಯಲ್ಲಿ ಬಿದ್ದೆ. ನಿನಗೆ ನೀನು ಇರಬೇಕಾದ ಜಾಗದಲ್ಲಿ ಎಲ್ಲೋ ಒಂದು ಬದಿಯಲ್ಲಿ ಬಿದ್ದುಕೊಂಡಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ ನೀನು ಆ ಸ್ಥಳವನ್ನು ಬಿಟ್ಟು ಈ ಮಾರ್ಗದ ಮಧ್ಯದಲ್ಲಿ ಬಂದುಬಿಟ್ಟರೆ ಮೃದು ಪಾದಕ್ಕೆ ಚುಚ್ಚಿ ರಕ್ತ ಇಣುಕುವ ಹಾಗೆ ಮಾಡುತ್ತೀಯಾ? ಅದು ನಿನ್ನ ತಪ್ಪಲ್ಲವಾ? ಸಾಗುವ ಹಾದಿಗಳ ಬಗ್ಗೆ ನಿನಗೊಂದು ಚೂರು ಕನಿಕರ ಇರಬೇಕಲ್ಲವೇ? ನೀನು ಮಾಡೋ ತಪ್ಪಿಗೆ ಯಾರೋ ಬಡಪಾಯಿ ಶಿಕ್ಷೆ ಅನುಭವಿಸುವುದು ಎಷ್ಟು ಸರಿ?"
"ಹಲೋ ಮಾರಾಯ ಯಾಕೆ ನನ್ನನ್ನು ದೂರ್ತೀಯಾ? ದಾರಿಯಲ್ಲಿ ಸಾಗುತ್ತಿರುವ ನಿನಗೆ ಸುತ್ತಮುತ್ತಲೇನಿದೆ ಅನ್ನುವುದನ್ನ ಗಮನಿಸುವಷ್ಟು ವ್ಯವಧಾನವಿಲ್ಲ ಅಂದರೆ ನೀನು ಸ್ಪಷ್ಟ ದೃಷ್ಟಿಯನ್ನು ಹೊಂದಿಲ್ಲ ಅಂತ. ಇವರು ಇಲ್ಲೇ ಬದುಕಬೇಕು ಅನ್ನುವ ಯಾವ ಒತ್ತಾಯವೂ ಇಲ್ಲ. ಅವರವರ ಇಚ್ಛೆಯಂತೆ ಬದುಕಬಹುದು. ನೀನು ಸಾಗುತ್ತಿರುವ ದಾರಿಯಲ್ಲಿ ನನ್ನ ಕಂಡು ನನ್ನಿಂದ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ದಾರಿ ಸರಿಸಿ ಮುಂದುವರೆ ಅಥವಾ ಇನ್ನೂ ಮನಸ್ಸು ವಿಶಾಲವಾಗಿದ್ದರೆ ನನ್ನ ಎತ್ತಿ ಬದಿಗಿಟ್ಟು ಯಾರಿಗೂ ತೊಂದರೆಯಾಗದ ಹಾಗೆ ನೀನು ಮುಂದುವರಿಯಬಹುದು. ಎಲ್ಲವೂ ನಿನ್ನ ಬಳಿ ಇರುವಾಗ ನನ್ನ ಮೇಲೆ ತಪ್ಪನ್ನು ಹೊರಿಸುವುದು ಎಷ್ಟು ಸರಿ? ನಾನು ಬದುಕುತ್ತಿದ್ದೇನೆ, ನೀನು ಮುಂದುವರಿಯುತ್ತ ಹೋದಹಾಗೆ ಎಚ್ಚರಿಕೆಯಿಂದ ಮುಂದುವರೆಯುವುದು ಒಳ್ಳೆಯದು ಏಕೆಂದರೆ ನಿನ್ನ ಬದುಕು ನಿನ್ನ ಕೈಯಲ್ಲಿ ಅಲ್ವಾ..."
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ