ಸ್ಟೇಟಸ್ ಕತೆಗಳು (ಭಾಗ ೪೭೬) - ಪತ್ರ

ಸ್ಟೇಟಸ್ ಕತೆಗಳು (ಭಾಗ ೪೭೬) - ಪತ್ರ

ಎಲ್ಲವನ್ನು ಕಾಲ ನಿರ್ಧರಿಸುತ್ತದೆ. ಅದಕ್ಕಾಗಿ ನಮ್ಮ ಹಣೆಬರಹ ಇಷ್ಟು ಅಂತ ನೊಂದುಕೊಳ್ಳುವುದು ಸರಿಯಲ್ಲ ಅಂತ ನನಗನಿಸುತ್ತದೆ. ನಾನು ಪ್ರಯತ್ನಪಟ್ಟ ಸಂದರ್ಭ ಸರಿಯಾಗಿ ಇಲ್ಲದಿರಬಹುದು, ನನ್ನ ಪ್ರಯತ್ನ ಸರಿಯಾಗಿತ್ತು ಆ ಕಾಲದಲ್ಲಿ ನನಗೆ ಅದಕ್ಕೆ ಪ್ರತಿಫಲ ಸಿಗದೇ ಇರಬಹುದು ಇದಕ್ಕೆ ನಾನು ಕಾರಣನಲ್ಲ. ಹಾಗಾಗಿ ನೋವನ್ನುಂಡು ನನ್ನಿಂದ ಸಾಧ್ಯವಿಲ್ಲ ಎಂದು ಕೊರಗುವುದಕ್ಕಿಂತ ಇನ್ನೊಂದು ಸಲ ಪ್ರಯತ್ನ ಪಡುತ್ತೇನೆ, ನನ್ನ ಓದಿದ ಪ್ರಮಾಣಕ್ಕೆ ಇನ್ನೊಂದಷ್ಟು ಜ್ಞಾನವನ್ನು ಸೇರಿಸಿಕೊಂಡಾಗ ಮಾತ್ರ ನಾನು ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದೇನೋ, ಇನ್ನೊಂದಷ್ಟು ಪರಿಶ್ರಮದ ಅವಶ್ಯಕತೆ ಮುಂದಿನ ಹೆಜ್ಜೆ ಸಾಗುವುದಕ್ಕೆ ಬೇಕಿದೆ ಎಂದೆನಿಸುತ್ತದೆ. ಹಾಗಾಗಿ ನಾನು ಮತ್ತೊಮ್ಮೆ ಪ್ರಯತ್ನಪಡುತ್ತೇನೆ. ಅಭ್ಯಾಸಗಳು ಸಾಕಾಗಿಲ್ಲದ ಕಾರಣ ನನಗೆ ಸೋಲು ಎದುರಾಗಿರಬಹುದು ಇದು ನನ್ನ ಜೀವನದ ಅಂತಿಮ ದಿನವಲ್ಲ ಅಂತಿಮ ಕ್ಷಣವೂ ಅಲ್ಲ. ಸಾಗುವ ದಾರಿ ತುಂಬಾ ದೂರ ಇದೆ. ಇನ್ನೊಂದಷ್ಟು ಕಠಿನ ಪರಿಶ್ರಮವನ್ನು ಪಡಬೇಕಾಗಬಹುದು. ಗೆದ್ದಾಗ ಜೊತೆಗಿದ್ದವರೆಲ್ಲ ಸೋತಾಗ ನನ್ನ ಹಿಂದೆ ಇರಬೇಕು ಎಂದೇನೂ ಇಲ್ಲ ಅಥವಾ ಜೊತೆಗೆ ಯಾರೋ ಇದ್ದಾರೆ ಅನ್ನೋ ಕಾರಣಕ್ಕೆ ನಾನು ಗೆಲ್ಲುವುದಲ್ಲ. ಬದುಕು ನನ್ನದು. ಇಲ್ಲಿ ಜೊತೆಗೆ ಯಾರಾದ್ರೂ ಇದ್ದರೂ ಇಲ್ಲದಿದ್ದರೂ ನಾನು ನನ್ನ ದಾರಿಯನ್ನ ಸಾಗಲೇಬೇಕು. ನಾನು ಗೆಲುವನ್ನ ಪಡೆದರೂ, ಒಳಿತಾದರೂ ಅದು ಅಂತಿಮವಲ್ಲ. ಮತ್ತೆ ಸಾಗುವ ದಾರಿ ಇದೆ ಅದು ನಿರಂತರವಾದ ಪ್ರಕ್ರಿಯೆ. ಹಾಗಾಗಿ ನಾನೆಲ್ಲೂ ನಿಲ್ಲುವ ಪ್ರಮೇಯವಿಲ್ಲ. ಆಗಾಗ ಕೆಲವೊಂದು ಕಡೆ ಅಡೆತಡೆಗಳು ಸಿಗುತ್ತವೆ ಅಲ್ಲಿ ನಿಂತು ಮುಂದುವರಿಯಬೇಕು. ಸೋತಾಗ ಜೀವನವೇ ಹೋಯಿತು ಅನ್ನುವ ಜಾಯಮಾನ ನನ್ನದಲ್ಲ ಸಾಗುತ್ತೇನೆ. ಇನ್ನೊಂದಷ್ಟು ಹೆಚ್ಚು ಪ್ರಯತ್ನಪಡುತ್ತೇನೆ ."

ಇದು ನಾನು ಅವನ ಡೈರಿಯಲ್ಲಿ ಓದಿದ ಬರಹಗಳು. ಅವನಿಗೆ ಹಲವಾರು ಸೋಲುಗಳು ಎದುರಾಗಿತ್ತು. ನನಗನ್ಸುತ್ತೆ ಖಂಡಿತವಾಗಿ ಗೆಲ್ತಾನೆ ಯಾಕೆಂದರೆ ಅವನಿಗೆ ಅವನೇನು ಗೊತ್ತಿದೆ. ನಮಗೆ ನಾವು ಅರ್ಥವಾದರೆ ಬದುಕು ತುಂಬ ಸುಲಭವಾಗಿ ನಮ್ಮ ಕೈಯಲ್ಲಿ ಇರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ