ಸ್ಟೇಟಸ್ ಕತೆಗಳು (ಭಾಗ ೪೭೭) - ಮುದ್ದು ಜೀವಗಳು
ನಗುವಿನ ಮನೆಯೊಂದು ಊರಿನಲ್ಲಿ ನೆಲೆನಿಂತಿದೆ. ಬದುಕುತ್ತಿರುವ ಪುಟ್ಟ ಜೀವಗಳು ಒಬ್ಬರಿಗೊಬ್ಬರು ಆಸರೆಯಾಗಿವೆ. ಆಕೆ ದೇಹಕ್ಕೆ ಚೈತನ್ಯ ತುಂಬುವ ಹೃದಯದೊಳಗಿನ ನೋವುಗಳಿಗೆ ಪರಿಹಾರ ನೀಡುವ ವೈದ್ಯೆ, ಆತ ದೇವರನ್ನ ಸಾಮಿಪ್ಯದಲ್ಲಿ ಕಾಣಲು ಭಕ್ತಿಯೆಂಬ ಮಾರ್ಗದಿಂದ ಅರ್ಚನೆಗೈಯುವ ಭಕ್ತ .
ಮುದ್ದು ಅನ್ನುವ ಪದಕ್ಕೆ ಒಂದುಸಲ ಅಸೂಯೆ ಹುಟ್ಟಿಸುವಂತಹ ಪ್ರೀತಿಯ ಬದುಕು ಅವರದು. ಆಕೆಯೋ ಕನಸಿನ ಗೋಪುರಗಳ ದೊಡ್ಡ ಮೂಟೆಗಳನ್ನು ಕಟ್ಟಿಕೊಂಡಿದ್ದಾಳೆ .ಆತನಿಗೆ ಅವಳೇ ಬದುಕು. ಎಲ್ಲ ಕನಸುಗಳನ್ನು ನೆರವೇರಿಸಲು ದಿನವು ಶ್ರಮ ವಹಿಸುತ್ತಿದ್ದಾನೆ. ಭಕ್ತಿಯ ದುಡಿಮೆಯಲ್ಲಿ ಕಿಂಚಿತ್ತೂ ಯಾರಿಗೂನ ನೋವಾಗದಂತೆ ತಾಳ್ಮೆಯಿಂದ ಪ್ರೀತಿಯಿಂದ ಕೆಲಸ ನಿರ್ವಹಿಸುತ್ತಾನೆ. ಆಕೆಗೆ ನೋವಾಗುವ ಸಣ್ಣ ಸೂಚನೆ ಸಿಕ್ಕಿದರೂ ಆತನ ಕಣ್ಣೀರು ಜಾರುತ್ತದೆ. ಆಕೆಯ ಜೋರು ಉಸಿರಿಗೆ ಆತನ ಎದೆಯಲ್ಲಿ ಸಣ್ಣ ಕಂಪನ ಉಂಟಾಗುತ್ತದೆ. ಆತನೆದೆಯಲ್ಲಿ ಆಕೆ ಕಿವಿಯಾನಿಸಿದಾಗ ಆತನಿಗೆ ಸಮಾಧಾನ. ಆಕೆಗಂತೂ ಬೇರೆ ಬೇರೆ ಊರುಗಳನ್ನು ನೋಡುವ ಬಯಕೆ ಪ್ರತಿ ಊರಿನಲ್ಲೂ ತನ್ನಿನಿಯನ ಜೊತೆ ಕೈ ಹಿಡಿದು ನಡೆಯುವ ಆಸೆ. ಆತ ಸಾಧ್ಯವಾದಲ್ಲೆಲ್ಲ ಜೊತೆಯಾಗಿ ಹೆಜ್ಜೆ ಇರಿಸಿದ್ದಾನೆ. ಇನ್ನೊಂದಷ್ಟು ಹೆಜ್ಜೆಗಳನ್ನ ಇರಿಸುವ ಕಾತುರದಲ್ಲಿ ದಿನಕ್ಕಾಗಿ ಕಾಯುತ್ತಿದ್ದಾನೆ. ಹುಸಿ ಮುನಿಸಿನ ಸಣ್ಣ ಜಗಳವು ಕ್ಷಣದಲ್ಲಿ ಮಾಯವಾಗಿ ಆಕೆಯ ನಗುವಿನಲ್ಲಿ ಆತ ಜಗತ್ತನ್ನೇ ಕಂಡಿದ್ದಾನೆ. ಅಮ್ಮನಂತಹ ಪ್ರೀತಿ ತನಗೆ ದೊರೆತದ್ದಕ್ಕೆ ದೇವರಿಗೆ ಇನ್ನೆರಡು ಹೂವು ಹೆಚ್ಚಿಗೆ ಅರ್ಪಿಸಿದ್ದಾನೆ. ಅಮ್ಮನ ಮೊಗದಲ್ಲಿ ನಗು ತನ್ನ ನಂಬಿದ ತನ್ನವಳ ಮನಸ್ಸಿನಲ್ಲಿ ನೆಮ್ಮದಿಯ ಉಸಿರು ಕಂಡರೆ ಅವನ ಬದುಕು ಸಾರ್ಥಕ್ಯ ಕಂಡಂತೆ. ಪ್ರೀತಿಯ ಮುಂದೆ ಯಾವುದು ದೊಡ್ಡದು ಅನಿಸಲಿಲ್ಲ ಹಾಗಾಗಿ ಅವಳಿಗೆ ಒಂದಿಷ್ಟು ತ್ಯಾಗಗಳನ್ನು ಮಾಡಿ, ನಂಬಿ ಬಂದ ಪುಟ್ಟ ಮನಸನ್ನ ಜೋಪಾನವಾಗಿ ಕಾಪಿಟ್ಟುಕೊಂಡಿದ್ದಾನೆ. ಇನ್ನೊಂದಷ್ಟು ಕನಸುಗಳು ಬದುಕುತ್ತಿವೆ. ದೇವರ ಗುಡಿಯಲ್ಲಿ ಎಲ್ಲರ ಒಳಿತಿಗೆ ದೀಪ ಹಚ್ಚುತ್ತಿದ್ದಾನೆ.
ಇಬ್ಬರದ್ದೂ ಒಂದೇ ಬದುಕು, ಒಂದೇ ಕನಸು. ದೇವರು ಕೂಡ ಮತ್ತಷ್ಟು ಖುಷಿ ಖುಷಿಯಿಂದ ಹರಸುತ್ತಿದ್ದಾನೆ. ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾನೆ. ನಾವು ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕಷ್ಟೇ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ