ಸ್ಟೇಟಸ್ ಕತೆಗಳು (ಭಾಗ ೪೮೭) - ಈ ದಿನ

ಸ್ಟೇಟಸ್ ಕತೆಗಳು (ಭಾಗ ೪೮೭) - ಈ ದಿನ

ಆ ಭಾವಕ್ಕೆ ಅದೇನೆಂದು ಹೆಸರಿಡುವುದು ಅನ್ನೋದು ಅರ್ಥವಾಗುತ್ತಿಲ್ಲ. ಕಾಲೇಜಿನ ಪರೀಕ್ಷೆಯನ್ನು ಮುಗಿಸಿ ಹೊರಗಡೆ ಹೆಜ್ಜೆಯಿಟ್ಟಿದ್ದಾರೆ. ಜೀವನದ ದೊಡ್ಡ ಪರೀಕ್ಷೆಗಳು ಮುಂದೆ ಕಾಯುತ್ತಿವೆ. ಆದರೆ ತರಗತಿಯ ಒಳಗೆ ಕುಳಿತು ಸಹಪಾಠಿಗಳ ಜೊತೆಗೆ ಬರೆದ ಕೊನೆಯ ಪರೀಕ್ಷೆ ಇದಾಗಿದೆ. ಇಂದು ಹೊರಗೆ ಹೆಜ್ಜೆ ಇಡುತ್ತಿರುವವರೆ ಮುಂದೆ ಬದುಕಿನ ವಿದ್ಯಾರ್ಥಿಗಳಾಗಿರುತ್ತಾರೆ. ಮೊದಲ ಹೆಜ್ಜೆ ಈ ಕಾಲೇಜಿನೊಳಕ್ಕೆ ಇಟ್ಟಾಗ ಮನಸ್ಸಿನೊಳಗೆ ಕಟ್ಟಿಕೊಂಡ ಕನಸುಗಳೇನು, ಇದ್ದ ಗೆಳೆಯರು, ಎದೆಯೊಳಗೆ ಮೂಡುತ್ತಿದ್ದ ಭಯ, ಆತಂಕ ಎಲ್ಲವೂ ದಿನ ಹೋಗ್ತಾ ಹೋದ ಹಾಗೆ ಬದಲಾಗುತ್ತಾ ಹೋದವು. ಆತಂಕದಿಂದ ಆತ್ಮೀಯತೆ, ಇಬ್ಬರಿದ್ದರು ನಾಲ್ವರಾದರು, ಹೊಸ ಸಂಬಂಧ ಹೊಸ ಭಾವ ಹೊಸ ಮುಖ ಎಲ್ಲವೂ ಅತ್ಯಂತ ಆತ್ಮೀಯತೆಯನ್ನು ಹುಟ್ಟಿಸಿತು.ಒಬ್ಬರ ಬಗ್ಗೆ ಮೊದಲು ಅಂದುಕೊಂಡಿದ್ದ ಭಾವ ಅವರನ್ನು ಅರ್ಥೈಸಿಕೊಳ್ಳುತ್ತ ಹೋದಹಾಗೆ ಬದಲಾಗುತ್ತ ಹೋಯಿತು. ಹೊಸತೊಂದು ಜಗತ್ತಿಗೆ ತೆರೆದುಕೊಂಡವು. ಪರರ ಕೈ ಹಿಡಿದು ನಡೆಯಬೇಕಾಗಿದ್ದವರು, ಬೇರೆಯವರ ಕೈಹಿಡಿದು ನಡೆಸುವ ಮಟ್ಟಿಗೆ ಬೆಳೆದು ನಿಂತರು. ತಮ್ಮನ್ನ ಜಗತ್ತಿಗೆ ಹೊಸ ರೀತಿಯಲ್ಲಿ ಪರಿಚಯ ಮಾಡಿಕೊಂಡರು. ಪ್ರೀತಿಯೋ ಸ್ನೇಹವೋ ಎಲ್ಲ ಭಾವಗಳು ಮನಸ್ಸಿನೊಳಗೆ ಹಾಗೆಯೇ ಅದು ನೆನಪಿನ ಬುತ್ತಿಗಳನ್ನು ಗಟ್ಟಿಗೊಳಿಸಿ ಬಿಟ್ಟಿದೆ. ಆಗಾಗ ಜಗಳಗಳಾಗಿವೆ ಸಿಟ್ಟು ಕೋಪ ಕೆಲವೊಮ್ಮೆ ವಾರ ತಿಂಗಳುಗಳನ್ನು ದಾಟಿದೆ ಕೆಲವು ಗಂಟೆಗಳಲ್ಲಿ ಮಾಯವಾಗಿದೆ. ಬಿಟ್ಟು ಹೊರಡುವಾಗ ಜಗತ್ತನ್ನೇ ಬಿಟ್ಟುಹೋಗುತ್ತಿದ್ದಾರೋ ಅನ್ನುವ ಭಾವ. ಆದರೆ ಮನಸ್ಸಿಗೆ ಗೊತ್ತಿದೆ ಮತ್ತೆ ಭೇಟಿಯಾಗಬಹುದು ಅಂತ. ಆದರೆ ಮುಂದಿನ ಜವಾಬ್ದಾರಿಗಳು ಬದುಕಿನ ಹೊಸ ರೀತಿಯ ಪರೀಕ್ಷೆಗಳಲ್ಲಿ ಮತ್ತೊಮ್ಮೆ ಎಲ್ಲರ ಮುಖವನ್ನು ನೋಡುವುದಕ್ಕೆ ಸಾಧ್ಯವಿದೆಯೋ ಇಲ್ಲವೋ ಅನ್ನುವ ಸಂಶಯಕ್ಕೆ ಕಣ್ಣೀರು ನೀರಿಳಿಸುತ್ತಿದೆ. ಯಾರೂ ಸೋತವರೇ ಇಲ್ಲ. ಪ್ರತಿಯೊಬ್ಬರೂ ಗೆದ್ದವರೇ. ಇನ್ನು ಬದುಕಿನ ದಾರಿ ತುಂಬ ದೂರ ಇದೆ. ಅಲ್ಲೊಂದಷ್ಟು ಕಲ್ಲುಮುಳ್ಳುಗಳು ಏರು ತಗ್ಗುಗಳು ಕೆಲವೊಂದು ಕಡೆ ನಿಂತು ಹೋರಡಬೇಕು ,ಓಡಬೇಕು  ಎಲ್ಲವನ್ನ ಅನುಭವಿಸಿಕೊಂಡು ಸಾಗಬೇಕು.  ಇಂದು ಮನಸಲ್ಲಿ ಅಂದುಕೊಂಡ ಗುರಿಗೆ ಎಲ್ಲರೂ ತಲುಪಲಿ ಎಂದು ಆಶಿಸಬಹುದು  ಅಷ್ಟೇ .ಅವರವರ ಪ್ರಾಮಾಣಿಕತೆ ನಂಬಿಕೆ ಸಾಮರ್ಥ್ಯದ ಮೂಲಕ ಇನ್ನೂ ಎತ್ತರಕ್ಕೇರಲು ಸಾಧ್ಯವಿದೆ . ಪ್ರತಿಯೊಂದು ಹಂತವನ್ನು ತಲುಪಿದಾಗ ಒಮ್ಮೆ ತಿರುಗಿ ನೋಡಿಬಿಡಿ, ಜೀವನ ಖುಷಿಯಾಗಿದ್ದ ಬದುಕಿಗೆ ಹೊಸ ದಿಕ್ಕನ್ನು ತೋರಿಸಿದ ಸಂಸ್ಥೆಯೊಂದು ನಿಮ್ಮನ್ನ ನೋಡಿ ಪ್ರೀತಿಯ ನಗೆ ಬೀರುತ್ತಿರುತ್ತದೆ. ನೆನಪಿರಲಿ ಹೆಜ್ಜೆಗಳು ದೂರ ದೂರವಾಗುತ್ತಾ ಹೋದಹಾಗೆ ಒಮ್ಮೆ ತಿರುಗಿ ಬಂದು ಈ ಕಾಲೇಜಿನಲ್ಲಿ ಓಡಾಡಿ, ನಿಮ್ಮ ತರಗತಿಯೊಳಗೆ ಕುಳಿತು ವಿದ್ಯೆ ಹೇಳಿಕೊಟ್ಟವರು ,ದಿನವೂ ಎದುರಾದವರನ್ನು ಒಮ್ಮೆ ಮಾತನಾಡಿಸಿ ಮತ್ತೆ ಇನ್ನಷ್ಟು ದೂರ ಸಾಗಲು ಮತ್ತೊಂದಷ್ಟು ಸ್ಪೂರ್ತಿ ತುಂಬಿ ಮುನ್ನುಗ್ಗಿ. ಬದುಕು ಅದ್ಭುತವಾಗಿರುತ್ತದೆ. ಏಕೆಂದರೆ ಇದು ನೀವಂದುಕೊಂಡ ಬದುಕು. ಅಂದುಕೊಂಡಂತೆ ಬದುಕಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ