ಸ್ಟೇಟಸ್ ಕತೆಗಳು (ಭಾಗ ೪೯೯) - ಏನಾಗಬೇಕಿತ್ತು ?
ನಾನು ನಾಯಿ ಮರಿ ಆಗಿರಬೇಕಿತ್ತು. ಅದನ್ನಾದರೆ ಆಗಾಗ ಬಂದು ಎತ್ತುಕೊಳ್ಳುತ್ತಾರೆ ಅದಕ್ಕೆ ಬೇಕಾಗಿರುವುದನ್ನೆಲ್ಲ ತಂದುಕೊಡುತ್ತಾರೆ. ಅದರ ಊಟ ತಿಂಡಿಗಳ ಬಗ್ಗೆ ಕೇಳುತ್ತಾರೆ. ದಿನದಲ್ಲಿ ಎರಡು ಸಲವಾದರೂ ಹೊರಗಡೆ ಕರೆದುಕೊಂಡು ಹೋಗುತ್ತಾರೆ. ಮನೆಗೆ ಬಂದವರೆಲ್ಲ ಅದನ್ನೇ ಮುದ್ದು ಮಾಡುತ್ತಾರೆ. ಅದರ ಫೋಟೋ ತೆಗೆದು ಎಲ್ಲಿಯೆಲ್ಲ ಸಾಧ್ಯ ಇದೆಯೋ ಎಲ್ಲಾ ಕಡೆಗೂ ತೋರಿಸುತ್ತಿದ್ದಾರೆ. ಅದರಿಂದಾಗಿ ನಮ್ಮ ಮನೆಗೆ ಹೆಚ್ಚು ಜನ ಬರ್ತಾ ಇದ್ದಾರೆ. ಇಷ್ಟಿರುವಾಗ ನಾನು ಈ ಮನೆಯಲ್ಲಿ ಮಗಳಾಗಿರುವುದಕ್ಕಿಂತ ನಾಯಿಯಾಗಿದ್ರೇನೆ ಚೆನ್ನಾಗಿರುತ್ತಿತ್ತು. ಮನೇಲಿ ನನ್ನ ಜೊತೆ ಮಾತನಾಡುವುದಕ್ಕೆ ಅಪ್ಪ ಅಮ್ಮನಿಗೆ ಸಮಯ ಇಲ್ಲ. ಕೇಳಿದ್ರೆ ಎಲ್ಲಾ ಫೀಸ್ ಗಳು ಜಾಸ್ತಿ ಆಗಿದ್ದಾವೆ, ನಿನಗೆ ಎಜುಕೇಶನ್ ಗೆ ದುಡ್ಡು ಬೇಡ್ವಾ ಅಂತಾರೆ, ಹೊರಗಡೆ ಕರೆದುಕೊಂಡು ಹೋಗುವುದಕ್ಕೆ ಅವರ ಬಳಿ ಸಮಯವಿಲ್ಲವಂತೆ, ನಾನು ಓದ್ಕೋಬೇಕಂತೆ, ಪರೀಕ್ಷೆಯಲ್ಲಿ ರ್ಯಾಂಕ್ ತೆಗಿಬೇಕು ಅಂತೆ. ಯಾರಾದರೂ ನನ್ನತ್ರ ಆಟ ಆಡೋದಕ್ಕೆ ಬಂದರೆ ಇಲ್ಲ ಅವಳಿಗೆ ಓದಲಿಕ್ಕೆ ಇದೆ ಅಂತ ಹೇಳಿ ನನ್ನನ್ನ ಓದಿನ ಕೋಣೆಗೆ ಕಳಿಸಿಬಿಡುತ್ತಾರೆ, ನನಗೆ ನನ್ನದೇ ಆದ ಒಂದು ಕೊಠಡಿ ಅಲ್ಲಿ ಓದೋದನ್ನ ಬಿಟ್ಟು ಬೇರೆ ಯಾವ ಅವಕಾಶ ನನಗಿಲ್ಲ. ಇಷ್ಟ ಬಂದಾಗ ಟಿವಿ ನೋಡುವ ಹಾಗಿಲ್ಲ, ಯಾರ ಬಳಿಯೂ ಮಾತನಾಡುವ ಹಾಗಿಲ್ಲ, ನಾನು ನನ್ನ ಮನೆಯವರ ಆಸೆಗಳನ್ನು ತೀರಿಸುವುದಕ್ಕೆ ಅಂತಲೇ ಹುಟ್ಟಿರುವ ಒಂದು ಜೀವಿ ಅಷ್ಟೇ, ಮನಸ್ಸಿನ ಮಾತನ್ನು ಕೇಳುವವರಿಲ್ಲ. ಅದಕ್ಕೆ ನನಗನಿಸುವುದು ನಾನು ನಾಯಿ ಆಗಿರಬೇಕಿತ್ತು, ಆರೈಕೆ ಪ್ರೀತಿ ಮಮತೆ ಎಲ್ಲವೂ ಸಿಗುತ್ತಾ ಇತ್ತು. ನನಗೆ ಸದ್ಯಕ್ಕೆ ಬೇಕಾಗಿರೋದು ಪ್ರೀತಿಸುವ ಜೀವಗಳು ಜೊತೆಗಿರುತ್ತೇವೆ ಅಂತ ಧೈರ್ಯ ತುಂಬುವ ಮಾತುಗಳು. ಇಲ್ಲವಾದರೆ ಪ್ರತಿ ಸೋಲಿಗೂ ನನ್ನನ್ನೇ ಬೈಯೋದಾದ್ರೆ ನನಗೆ ಜೀವನದಲ್ಲಿ ಸೋಲಿನ ಅನುಭವ ಸಿಗುವುದ್ಯಾವಾಗ. ಇದು ನನ್ನ ಪ್ರಶ್ನೆ ಅದಕ್ಕೆ ನಾನು ನಾಯಿ ಆಗಿರಬೇಕಿತ್ತು... ಇದು ಅವಳ ಮಾತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ