ಸ್ಟೇಟಸ್ ಕತೆಗಳು (ಭಾಗ ೫೦೧) - ಮಾತು
ಕಮ್ಯುನಿಕೇಶನ್ ಸ್ಕಿಲ್ ಇಂಪ್ರೂ ಆಗಬೇಕು, ಮಾತನಾಡುವ ಕಲೆ ನಮ್ಮೊಳಗೆ ಸಿದ್ಧಿಸಬೇಕು. ಸಾವಿರಾರು ಜನರು ಇದ್ದರೂ ಕೂಡ ಅವರ ಮುಂದೆ ಮಾತನಾಡುವ ಧೈರ್ಯ ನಮ್ಮೊಳಗೆ ಹುಟ್ಟಬೇಕು. ನಮಗೆ ಅರ್ಥವಾದದ್ದನ್ನು ಮುಂದಿನವರಿಗೆ ಅರ್ಥ ಮಾಡಿಸುವ ಶಕ್ತಿ ನಮ್ಮೊಳಗೆ ಹೆಚ್ಚಾಗಬೇಕು. ಹೀಗೆ ಮಾತಿನ ವಿಚಾರವಾಗಿ ದೊಡ್ಡ ದೊಡ್ಡ ವಾಕ್ಯಗಳನ್ನು ಕೇಳಿರುತ್ತೇವೆ. ಅವುಗಳಿಗೆ ಬೇಕಾದ ತರಗತಿಗಳು, ತರಬೇತಿಗಳು, ವಿಡಿಯೋಗಳು ಕೂಡ ನಮಗೆ ಸಿಕ್ತಾವೆ ಆದರೆ ಹೊರಗೆ ಮಾತನಾಡುವುದನ್ನು ಹೇಳಿಕೊಟ್ಟಿದ್ದಾರೆ ವಿನಹ ನಮ್ಮೊಳಗೆ ನಾವಾಗಿ ಮಾತನಾಡುವುದನ್ನು ಎಲ್ಲೋ ಕೂಡ ತಿಳಿಸಿಲ್ಲ. ಹೊರಗೆ ಮಾತನಾಡುವುದಕ್ಕಿಂತ ಒಳಗೆ ಮಾತನಾಡುವುದು ನಮ್ಮೊಳಗೆ ನಾವು, ನಮಗೆ ಗೆಳೆಯನಾಗಿ ಒಂದಷ್ಟು ಪ್ರಶ್ನೆಗಳನ್ನ ಕೇಳಿ ಅದಕ್ಕ ಒಂದಿಷ್ಟು ಉತ್ತರವನ್ನು ಕಂಡುಕೊಂಡರೆ ಜಗತ್ತಿನ ಮುಂದೆ ತಲೆ ಎತ್ತು ನಿಲ್ಲುವಂತಹ ಶಕ್ತಿ ನಮ್ಮೊಳಗೆ ಸಂಚಯವಾಗುತ್ತದೆ. ಹಾಗಾಗಿ ಆಗಬೇಕಾಗಿರುವ ಮೊದಲ ಕೆಲಸ ನನ್ನೊಳಗೆ ಮಾತನಾಡಬೇಕು. ನನ್ನೊಳಗೊಬ್ಬನ ಮಾತು ನನಗೆ ಅರ್ಥವಾಗಬೇಕು. ಅವನಿಗೆ ಯಾವ ಭಾಷೆಯಲ್ಲಿ ಹೇಳುವುದು ಅನ್ನೋದು ನನಗೆ ತಿಳಿಯಬೇಕು. ಅವನು ನಮ್ಮ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದಾನೆ ನಾವು ಅವನ ಜೊತೆಗೆ ಸಂವಾದ ನಡೆಸುತ್ತಿದ್ದೇವೆ ಅಂದರೆ ನಾವೇನು ಅದ್ಭುತವನ್ನು ಸಾಧಿಸುತ್ತಿದ್ದೇವೆ ಎಂದು ಅರ್ಥ. ಇದು ನನ್ನ ಪ್ರಕಾರ... ನಿಮ್ಮ ಪ್ರಕಾರ...?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ