ಸ್ಟೇಟಸ್ ಕತೆಗಳು (ಭಾಗ ೫೦೯) - ಕಾಣೋದು

ಸ್ಟೇಟಸ್ ಕತೆಗಳು (ಭಾಗ ೫೦೯) - ಕಾಣೋದು

ಅಲ್ಲೊಬ್ಬ ಮೇಸ್ತ್ರಿ ಮನೆ ಕಟ್ಟುವ ಕೆಲಸ ಆರಂಭ ಮಾಡಿದ್ದಾರೆ. ಮನೆ ಹೇಗೆ ಕಾಣುತ್ತೆ ಅನ್ನುವ ಯೋಚನೆ ಅವರೊಳಗೆ ನಿಚ್ಚಳವಾಗಿತ್ತು. ಹಾಗಾಗಿ ಪ್ರತಿ ಕಲ್ಲುಗಳನ್ನ ತುಂಬಾ ಜಾಗರೂಕತೆಯಿಂದ ತನ್ನ ಯೋಚನೆಯಲ್ಲಿ ಹೇಗೆ ಮನೆ ಬರಬೇಕೋ ಅದೇ ತರಹ ಇಡುವುದಕ್ಕೆ ಆರಂಭ ಮಾಡಿದ. ಎಲ್ಲಿ ದೊಡ್ಡ ಕಲ್ಲುಗಳು, ಎಲ್ಲಿ ಸಣ್ಣ ಕಲ್ಲು, ಎಲ್ಲಿ ಎರಡು ಕಡೆ ಕೂಡಬೇಕು, ಎಲ್ಲಿ ಎತ್ತರವಾಗಬೇಕು, ಮನೆಯೊಳಗೆ ಯಾವ ಪ್ರದೇಶಕ್ಕೆ ಎಷ್ಟು ಸ್ಥಳವನ್ನು ನಿಗದಿ ಮಾಡಬೇಕು, ಇಷ್ಟೆಲ್ಲ ಕ್ರಮಬದ್ಧವಾಗಿ ಇಟ್ಟ ಕಾರಣ ಅವನು ಯೋಚಿಸಿದಂತೆ ಮನೆ ನಿರ್ಮಾಣವಾಯಿತು. ಮನೆ ಕಟ್ಟುತ್ತಾ ಹೋಗುತ್ತಾ ಇದ್ದ ಹಾಗೆ ಒಂದಷ್ಟು ಹೊಸ ಆಲೋಚನೆಗಳು ಮೂಡಿ ಬಂದ ಕಾರಣ ಮನೆ ಇನ್ನಷ್ಟು ಅದ್ಭುತವಾಗಿ ನಿರ್ಮಾಣ ಆಯಿತು. ಒಂದು ವೇಳೆ ಆ ಮೇಸ್ತ್ರಿಗೆ ಮನೆ ಹೇಗೆ ಕಾಣುತ್ತೆ ಅನ್ನುವ ಯೋಚನೆ ಇಲ್ಲದೆ ಇರುತ್ತಿದ್ದರೆ ಮನೆ ಅಷ್ಟು ಅದ್ಭುತವಾಗಿ ನಿರ್ಮಾಣ ಆಗುತ್ತಿರಲಿಲ್ಲ .ಹಾಗೆಯೇ ನಮ್ಮ ಜೀವನದಲ್ಲೂ ನಮಗೆ ಮುಂದೆ ನಾವು ತಲುಪಬೇಕಾದ ಹಾದಿಯ, ಗುರಿಯ ಸರಿಯಾದ ಮಾಹಿತಿ ಇರಬೇಕು. ಅದರ ಬಗ್ಗೆ ಯೋಚನೆಗಳಿರಬೇಕು. ಇಲ್ಲವಾದರೆ ನಾವು ಪ್ರತಿದಿನ ಸಾಗುವ ಹಾದಿಯಲ್ಲಿ ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡುವುದಕ್ಕಾಗುವುದಿಲ್ಲ. ನಾವು ಮಾಡಿದ ಕೆಲಸ ವ್ಯರ್ಥವಾಗಬಹುದು. ಕನಸುಗಳನ್ನು ಎಲ್ಲರೂ ಕಾಣುತ್ತೇವೆ.  ಆ ಹಾದಿಯಲ್ಲಿ ಮುಂದೆ ಸಾಗುತ್ತಾ ಹೋದ ಹಾಗೆ ಒಂದಷ್ಟು ಹೊಸ ಆಲೋಚನೆಗಳನ್ನ ನಮ್ಮೊಳಗೆ ತುಂಬಿಕೊಂಡು ಮುಂದುವರೆದರೆ ಕನಸಿನ ಗುರಿ ತುಂಬಾ ಹತ್ತಿರವಾಗುತ್ತದೆ .ತುಂಬಾ ಸುಲಭವಾಗಿ ತಲುಪೋದಕ್ಕೂ ಸಾಧ್ಯವಾಗುತ್ತದೆ....ಹಾಗಾಗಿ ಕನಸು ಕಣ್ಮುಂದೆ ಕಾಣುವಂತಿರಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ