ಸ್ಟೇಟಸ್ ಕತೆಗಳು (ಭಾಗ ೫೧೦) - ಯಾವಾಗ?

ಸ್ಟೇಟಸ್ ಕತೆಗಳು (ಭಾಗ ೫೧೦) - ಯಾವಾಗ?

"ಅಲ್ಲ ಕಣೆ ಹುಡುಗಿ ಅದೆಷ್ಟು ದಿನ ಕಾಯಬೇಕು, ನೀನು ನೆನಪುಗಳಲ್ಲಿ ಪ್ರತಿದಿನವೂ ಹೆಜ್ಜೆ ಇಟ್ಟುಕೊಂಡು ಸಾಗುತ್ತಾ ಇದ್ದೀಯ, ಆದರೆ ನಿಜ ಜೀವನದಲ್ಲಿ ನಿನ್ನ ಜೊತೆಗೆ ಏಳು ಹೆಜ್ಜೆಗಳನ್ನು ಇಟ್ಟು ಬಾಂಧವ್ಯದ ಜೊತೆಯನ್ನ ಕಳೆಯುವುದು ಯಾವತ್ತೂ ಅಂತ ಕಾಯ್ತಾ ಇದ್ದೇನೆ. ವರುಷಗಳು ದಾಟಿ ತಿಂಗಳುಗಳು ಬಂದು, ದಿನಗಳು, ವಾರ, ಗಂಟೆ ಕ್ಷಣಗಳೆಲ್ಲವೂ ವೇಗವಾಗಿ ಓಡ್ತಾ ಇದ್ದಾವೆ. ಪ್ರತಿಯೊಂದು ಗಂಟೆಯೂ ಮುಂದುವರಿತಾ ಹೋದ ಹಾಗೆ ನೀನು ಜೊತೆಗಿರದ ಸಮಯ ಕಳೆದು ಹೋಯಿತಲ್ಲ ಅನ್ನುವಂತಹ ಯೋಚನೆ ಬೇಸರವನ್ನುಂಟುಮಾಡುತ್ತದೆ. ನನ್ನ ಈಗಿನ ಜೀವನಕ್ಕೂ ನೀನು ಬಂದ ನಂತರ ಜೀವನಕ್ಕೂ ಅದೇನು ಅಂತಹ ಅದ್ಭುತ ಬದಲಾವಣೆಯಾಗುತ್ತೋ ಗೊತ್ತಿಲ್ಲ. ಆದರೆ ಈಗ ಬದುಕ್ತಾ ಇರೋ ಜೀವನಕ್ಕೆ ಇನ್ನೊಂದಷ್ಟು ಹೆಚ್ಚಿನ ಖುಷಿ ಜೊತೆ ಸೇರಬಹುದು. ಒಂದಷ್ಟು ಆಲೋಚನೆಗಳಿಗೆ ಗಟ್ಟಿ ನಿಂತು ಸ್ಪೂರ್ತಿ ತುಂಬುವ ಮಾತು ಸಿಗಬಹುದು, ಮನಸು ತುಂಬಾ ಭಾರವಾದಾಗ ಆಸರೆಗೆ ಹೆಗಲು ಸಿಗಬಹುದು, ಕೈ ಹಿಡಿದು ನಡೆಯೋಕೆ ಒಂಚೂರು ಮಮತೆ ಸಿಗಬಹುದು, ಅದಕ್ಕೋಸ್ಕರ ನೀನು ನನ್ನ ಜೊತೆಗಿರಬೇಕು. ಕೆಲವೊಂದು ಸಲ ಅಂದುಕೊಳ್ಳುತ್ತೇನೆ ಜವಾಬ್ದಾರಿಗಳು ಹೆಚ್ಚಾಗುತ್ತಾ ಹೋದ ಹಾಗೆ ನಿನ್ನನ್ನು ಮರೆತುಬಿಡಬಹುದು ಅಂತ, ಆದರೆ ಆ ಜವಾಬ್ದಾರಿಗಳನ್ನ ತುಂಬಾ ಚೆನ್ನಾಗಿ ನಿಭಾಯಿಸುವುದು ಹೇಗೆ ಅಂತ ನೀನೊಂದು ಸಲಾ ತಿಳಿಸಿಕೊಟ್ಟಿದ್ದೆ ಹಾಗಾಗಿ ಅಲ್ಲೂ ಕೂಡ ನಿನ್ನನ್ನ ಮರೆತು ಮುಂದು ಬರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಕಾಲ ಕೂಡಿ ಬರಬೇಕು ಅಂತಾರೆ, ಆ ಬರುವ ಕಾಲಕ್ಕೆ ಅದೆಷ್ಟು ದಿನ ಕಾಯಬೇಕು ಅಂತ ಗೊತ್ತಿಲ್ಲ. ಕನಸಲ್ಲಿ ಕಂಡ ಆ ಸುಮಧುರ ಗಳಿಗೆಗಳು ಕಣ್ಣ ಮುಂದೆ ಕಂಡ  ಕನಸಿನ ಹುಡುಗಿಗೆ ಕನಸಲ್ಲೇ ಮಾತಾಡಿಸುವ ಈ ಹುಚ್ಚು ಮನಸ್ಸಿಗೆ,  ನಿಜವಾಗಿಯೂ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಆ ಘಳಿಗೆ ಆದಷ್ಟು ಬೇಗ ಬರಲಿ ಅಂತ ಹಾರೈಸುತ್ತೇನೆ." ಹೀಗೆಂದು ಪತ್ರವನ್ನು ಮುಗಿಸಿ ಅದು ತಲುಪಬೇಕಾದ ವಿಳಾಸವನ್ನ ಬರೆದು ಅಂಚೆ ಡಬ್ಬಿಯೊಳಗೆ ಹಾಕಿ ಆತ ಗಡಿ ಕಾಯೋದಕ್ಕೆ ಹೊರಟುಬಿಟ್ಟ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ