ಸ್ಟೇಟಸ್ ಕತೆಗಳು (ಭಾಗ ೫೧೪) - ಹಕ್ಕಿ
ಅದು ಎರಡನೇ ಮಹಡಿಯ ಒಂದು ಕೊಠಡಿ ಅಲ್ಲಿ ನಾನೊಬ್ಬಳೇ ಕುಳಿತುಕೊಳ್ಳುವುದಲ್ಲ ಇನ್ನೂ ಹಲವರು ಅವರವರ ತರಗತಿಗೆ ಪಾಠಕ್ಕೆ ತರಲು ತೆರಳಲು ತಯಾರಿ ನಡೆಸುತ್ತಿರುತ್ತಾರೆ. ಆಗ ಕೇಳಿಸಿತೊಂದು ಪುಟ್ಟ ಹಕ್ಕಿಯ ದನಿ ಯಾರ ಕಿವಿಗೂ ಆ ಶಬ್ದ ಬಿದ್ದಿರಲಿಲ್ಲ. ನನಗೇನು ಭ್ರಮೆ ಅಂದುಕೊಂಡರೆ ಮತ್ತೆ ಕೇಳಿಸಿತಾ ಕೂಗು, ಆ ಕೂಗಿನಲ್ಲಿ ಅದೇನು ನೋವಿನ ಛಾಯೆ ಕಾಣುತ್ತಿತ್ತು ಯಾರಾದರೂ ಬಂದು ಸಹಾಯ ಮಾಡಿ ಅನ್ನುವಂತಹ ಕೂಗಿತ್ತು ಯಾವ ಕಡೆಯಿಂದ ಅಂತ ಗೊತ್ತಾಗಲಿಲ್ಲ ತರಗತಿಯ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದ್ದ ಕಾರಣ ಪಾಠವನ್ನು ಮುಗಿಸಿ ಮತ್ತೆ ಶಬ್ದ ಬಂದ ದಿಕ್ಕಿನ ಕಡೆ ನೋಡಲಾರಂಬಿಸಿದೆ. ತುಂಬಾ ಪ್ರಯತ್ನಗಳ ನಂತರ ಅಲ್ಲೊಂದು ಕಡೆ ಕೋಣೆ ಒಳಗಡೆ ಪುಟ್ಟ ಹಕ್ಕಿಯೊಂದು ಬಂಧಿಯಾಗಿತ್ತು. ಅದಕ್ಕೆ ಒಳನುಸುಳುವ ದಾರಿ ಗೊತ್ತಿತ್ತು ಹೊರ ತೆರಳುವ ದಾರಿ ಸಿಗುತ್ತಿರಲಿಲ್ಲ. ಅದಕ್ಕೆ ಕಿಟಕಿಯ ಬಾಗಿಲುಗಳನ್ನು ಕುಕ್ಕಿನಿಂದ ಬಡಿಯುತ್ತಾ ಗೋಡೆಗೆಲ್ಲ ಕುಕ್ಕಿನಿಂದ ಬಡಿಯುತ್ತಾ ದಾರಿ ಹುಡುಕುತ್ತಿತ್ತು. ತನ್ನದೇ ಕುಟುಂಬದವರ್ಯಾರು ಬರುವರೇನು ಅಂತ ಕಾಯುತ್ತಿತ್ತು .ಆದರೆ ಅದರ ಇನಿಯ ಆಗಿರಬಹುದು ಹೊರಗಡೆ ಕಿಟಕಿಯ ಆ ಕಡೆಯಿಂದ ವಿಚಿತ್ರ ಧ್ವನಿಯಲ್ಲಿ ಕೂಗಲು ಆರಂಭಿಸಿತ್ತು. ಇಷ್ಟು ನೋಡುತ್ತಿದ್ದ ನನಗೆ ಆ ನೋವನ್ನ ತಡೆದುಕೊಳ್ಳುವ ಶಕ್ತಿಯಾಗಲಿಲ್ಲ ಕಿಟಕಿಯನ್ನು ತೆರೆದೆ ಬಾಗಿಲನ್ನು ತೆರೆದೆ ಹಕ್ಕಿ ತುಂಬಾ ಹೊತ್ತು ಪ್ರಯತ್ನಪಟ್ಟು ಆ ಕಿಟಕಿಯಿಂದ ಹೊರ ಹಾರಿತು ಆದರೆ ಸ್ವಚ್ಛಂದ ಹಾರಾಟ ಸಂಭ್ರಮದ ಮಾತುಕತೆ ನನಗೆ ಕೇಳಿಸುತ್ತಿತ್ತು ಪಕ್ಕದಲ್ಲಿ ಇನ್ನೆರಡು ತರಗತಿಗಳಿದ್ದಾವೆ. ನಮ್ಮಂತಹ ಶಿಕ್ಷಕರ ಇನ್ನೊಂದು ಕೊಠಡಿಯೂ ಇದೆ. ಅದೇ ದಾರಿಯಲ್ಲಿ ಒಂದಷ್ಟು ಜನ ಓಡಾಡುತ್ತಾನೂ ಇರುತ್ತಾರೆ ಆದರೆ ಅವರು ಯಾರಿಗೂ ಆ ಕೂಗು ಕೇಳಿಸಿಲ್ಲ ಯಾಕೆ? ಮನಸ್ಸಿದ್ದವನಿಗೆ ಕೇಳಬೇಕಾದ ಕೂಗು ಅವರಿಗೆ ಯಾಕೆ ಕೇಳಿಸಿಲ್ಲ. ಕನಿಕರವೆಂಬ ಪುಟ್ಟ ಭಾವನೆ ಮನಸ್ಸಿನಿಂದ ಜಾರಿ ಎಲ್ಲೋ ಬಿದ್ದು ಹೋಗಿದಿಯೋ ಏನೋ. ಒಂದು ಸಲ ಎದೆ ಮೇಲೆ ಕೈ ಇಟ್ಟು ಸುತ್ತ ಕಿವಿಗೋಡಿ ಹಲವು ಮಾತುಗಳು ಮೌನವಾಗಿ ಎದೆಯನ್ನು ತಲುಪುತ್ತದೆ ಇಲ್ಲಿ ನಾವು ನಾವಾಗಿ ಉಳಿಯಬೇಕಾಗಿದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ