ಸ್ಟೇಟಸ್ ಕತೆಗಳು (ಭಾಗ ೫೨೦) - ಹೆಣ
ಮನೆಯೊಳಗೆ ಮಲಗಿದ ಹೆಣವನ್ನ ಮಸಣಕ್ಕೊಯ್ಯಲು ತಯಾರಿ ನಡೆದಿತ್ತು. ಚಟ್ಟದ ಮೇಲಿನ ಪಯಣ ಹೆಣಕ್ಕೆ ಆರಾಮದಾಯಕ ಎನಿಸುತ್ತಿತ್ತು. ಇಷ್ಟು ದಿನದ ಜಂಜಾಟಗಳು ಯೋಚನೆಗಳು ಸಿಟ್ಟು, ದ್ವೇಷ, ಕೋಪ, ಜಗಳ ಎಲ್ಲವನ್ನು ತೊರೆದು ನೆಮ್ಮದಿಯ ಸುಖದ ನಿದ್ದೆಯಲ್ಲಿ ಅದು ಮಸಣಕ್ಕೆ ಹೊರಟಿತ್ತು. ಆದರೆ ಮಸಣವ ತಲುಪುವ ದಾರಿ ಇನ್ನೂ ದೂರವಿದ್ದ ಕಾರಣ ತಾನು ಸತ್ತು ಮಲಗಿರುವುದಕ್ಕೆ ಅಸಹ್ಯ ಎನ್ನಿಸುವಂತಹ ಸನ್ನಿವೇಶಗಳು ಅಲ್ಲಿ ನಡೆಯಲು ಆರಂಭವಾದವು. ನೋಡುಗರಿಗೆ ದುಃಖದ ಮಡುವಿನಲ್ಲಿ ಜನ ಸೇರಿ ನಡೆಯುತ್ತಿದ್ದಾರೆ ಎಂದೆನಿಸಿದರು ಹೆಣಕ್ಕೆ ಅದರ ಸುತ್ತ ಮುತ್ತಲಿನ ಗುಸುಪಿಸು ಮಾತುಗಳು ನೇರವಾಗಿ ಕೇಳಿಸುತ್ತಿತ್ತು. ನೋವಿದ್ದಾಗ ಹತ್ತಿರ ಬರದವರೆಲ್ಲ ಮೆರವಣಿಗೆಯಲ್ಲಿ ಜೊತೆಗಾರರಾಗಿದ್ದರು. ಆಸ್ತಿಗಳನ್ನ ಪಾಲು ಮಾಡುವುದಕ್ಕೆ ಸಣ್ಣ ಮನಸ್ತಾಪಗಳು ಶುರುವಾಗಿದ್ದವು. ತಪ್ಪುಗಳ ಪಟ್ಟಿಗಳನ್ನೇ ಓದುತ್ತ ಓದುತ್ತಾ ನಡೆಯುತ್ತಿದ್ದರು. ತಮ್ಮ ತುರ್ತು ಕೆಲಸಗಳು, ತಮ್ಮ ಸಾಧನೆಗಳು, ತಮ್ಮ ಊರಿನ ವಿಶೇಷ ಇದೇ ಮಾತುಕತೆಯಲ್ಲಿ ಮಸಣದವರೆಗೂ ಸಾಗುತ್ತಿದ್ದವರಿಗೆ ಒಂದು ಕ್ಷಣವೂ ಸತ್ತವನ ಕೊನೆಯ ಕ್ಷಣದ ಯೋಚನೆಗಳ ಬಗ್ಗೆ ಅರಿವಿರಲಿಲ್ಲ. ಅವನ ನೋವಿಗೆ ಅವನ ಕಷ್ಟಕ್ಕೆ ಸ್ಪಂದಿಸದವರು ಇಂದು ಮಾತಿನ ಮಂಟಪವನ್ನು ಕಟ್ಟುತ್ತಿದ್ದರು. ಆತನಿಗೆ ಮುಕ್ತಿಯೆನಿಸಿದ್ದು ಚಿತೆಯ ಮೇಲಿಟ್ಟು ಬೆಂಕಿ ಇಟ್ಟಾಗಲೇ. ಬೆಂಕಿಯಲ್ಲಿ ಬೂದಿಯಾಗುತ್ತಾ ಹೋದ ಹಾಗೆ ಅಲ್ಲಿದ್ದ ಮಾತುಗಳು ಹೆಚ್ಚು ಶಾಖವನ್ನು ಪಡೆದುಕೊಂಡು ಮತ್ತಷ್ಟು ಪ್ರಕರವಾಗುತ್ತಾ ಮನೆಯೊಳಕ್ಕೆ ತಲುಪಿದವು. ಹೆಗಲಲ್ಲಿದ್ದ ಭಾರ ಇಳಿಸಿದರೂ ಮನಸ್ಸಿನ ಭಾರ ಹೆಚ್ಚಾಗುತ್ತಾ ಹೋಯಿತು. ಅದು ದುಡ್ಡಿಗಾಗಿ ಆಸ್ತಿಗಾಗಿ ಮಾತ್ರ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ