ಸ್ಟೇಟಸ್ ಕತೆಗಳು (ಭಾಗ ೫೩೬) - ಆಶಾಕಿರಣ

ಊರು ಬಿಡಲೇ ಬೇಕಿತ್ತು. ಓದಿದ ವಿದ್ಯೆಗೆ ಊರಿಗಿಂತ ಪರವೂರಿನಲ್ಲಿ ಕೆಲಸವೊಂದು ಕೈಬೀಸಿ ಕರೆದಿತ್ತು. ಹೊಸ ಹೊಸ ಅವಕಾಶಗಳು ಕೈಗೆಟುಕಿ ಬದುಕು ಬದಲಾಗುವ ಅವಕಾಶವಿತ್ತು. ಮನೆಯ ಸಂಭ್ರಮ, ಮಾತುಕತೆ ಸಂತೋಷಗಳೆಲ್ಲವನ್ನ ಬಿಟ್ಟು ಊರಲ್ಲದ ಊರಲ್ಲಿ ಬದುಕೋಕೆ ಆರಂಭ ಮಾಡಿದ್ದೆ. ಬದುಕುತ್ತಿದ್ದ ಊರೇ ಸ್ವಂತ ಊರಿಗಿಂತ ಹೆಚ್ಚಾಯ್ತು. ಊರಿಗಿಂತ ಹೆಚ್ಚು ಪರಿಚಯ ಇಲ್ಲಾಯಿತು. ಸಂಬಂಧಗಳು ಬೆಸೆದು ಕೊಂಡವು. ಆದರೆ ಯಾವ ಕಾರಣಕ್ಕೆ ಕೆಲಸವನ್ನ ಆರಿಸಿದೆನೋ ಆ ಕಾರಣ ಫಲಪ್ರದವಾಗಲೇ ಇಲ್ಲ. ಮನೆಯ ಕಷ್ಟಕ್ಕೆ ಹಿಂದೆ ಮುಂದೆ ನೋಡುತ್ತಾ, ಆ ಪರಿಹಾರಕ್ಕೆ ಖಾಲಿ ಕೈ ಮಾತ್ರ ನನ್ನನ್ನು ನೋಡಿ ನಗುತ್ತಾ ಇತ್ತು. ಹಾಗಾದ್ರೆ ಇಷ್ಟು ಸಮಯ ಓದಿದ್ಯಾಕೆ? ದುಡಿತಾ ಇರೋದು ಯಾಕೆ? ಜೀವ ಬಿಟ್ಟು ಹೊಸ ಹೊಸ ಆಲೋಚನೆಗಳಿಂದ ಪರಿಶ್ರಮ ಪಡುತ್ತಿರುವುದು ಯಾಕೆ? ಆದರೂ ಆ ಪರಿಶ್ರಮಕ್ಕೆ ಬೆಲೆ ಸಿಗುತ್ತೆ ಅನ್ನುವ ನಂಬಿಕೆಯಲ್ಲಿ ಬದುಕ್ತಾ ಇರೋದು. ಆ ನಂಬಿಕೆ ಆಗಾಗ ಮತ್ತಷ್ಟು ಹೆಚ್ಚಾಗಲಿಕ್ಕೆ ಒಂದಷ್ಟು ಪ್ರೋತ್ಸಾಹಗಳು ಸಿಗಲೇ ಬೇಕಲ್ವಾ? ಅದು ಸಿಗದೇ ಹೋದಾಗ ನೋವು ಅನ್ನೋದು ಕಣ್ಣಂಚಲಿ ಹಾದು ಮುಂದುವರೆದು ಬಿಡುತ್ತದೆ. ಕಾಯ್ತಾ ಇದ್ದೇನೆ ಊರು ಬಿಟ್ಟು ಊರು ಬಂದದ್ದಕ್ಕೆ ಸಾರ್ಥಕ ಭಾವ ನೋಡಬೇಕು, ವಿಪರೀತ ಚಿಂತೆಗಳು ಮಾಯವಾಗಿ ಒಂದಷ್ಟು ಬದುಕಿನ ಹೊಸ ಆಶಾಕಿರಣ ಬದುಕಿನಲ್ಲಿ ಮಿನುಗುವಂತಾಗಬೇಕು. ಅಷ್ಟೇ .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ