ಸ್ಟೇಟಸ್ ಕತೆಗಳು (ಭಾಗ ೫೫೪) - ವಿಪರ್ಯಾಸ
ಊರಿನ ಜನರೆಲ್ಲರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇಡೀ ಅಂಗಳದ ತುಂಬಾ ಶಾಮಿಯಾನುಗಳನ್ನ ಹಾಕಲಾಗಿದೆ. ಕೆಂಪು ಚಯರುಗಳು ಜನರಿಗೋಸ್ಕರ ಕಾಯುತ್ತಿದೆ. ಅಡುಗೆ ಕೋಣೆಯಲ್ಲಿ ಬಗೆ ಬಗೆಯ ತಿಂಡಿಗಳು ತಯಾರಾಗುತ್ತಿವೆ. ಬಂದವರಿಗೆ ಭರ್ಜರಿ ಊಟ ಸೇವಿಸಲು ಒಲೆಗಳು ಉರಿಯುತ್ತಿದ್ದಾವೆ, ಜನ ಒಬ್ಬೊಬ್ಬರಾಗಿ ಒಬ್ಬೊಬ್ಬರಾಗಿ ಬಂದು ಇಡೀ ಅಂಗಳದ ತುಂಬೆಲ್ಲ ಊರಿನ ಜನರು ಸೇರಿಕೊಂಡು ಬಿಟ್ರು. ಒಬ್ಬೊಬ್ಬರದು ಒಂದೊಂದು ಮಾತುಕತೆ. ಅದೇನು ಗುಣಗಾನ. ಸಾಧನೆಗಳ ಪಟ್ಟಿಗಳನ್ನ ಒಬ್ಬೊಬ್ಬರು ಓದಲು ಆರಂಭಿಸುತ್ತಾರೆ. ಒಂದೊಂದು ಘಟನೆ ಒಬ್ಬೊಬ್ಬರಿಗೆ ಒಂದೊಂದು ದಿಕ್ಕುಗಳನ್ನು ಪರಿಚಯಿಸಿಕೊಡಲು ಆರಂಭವಾಗುತ್ತವೆ. ಮನೆಯ ಚಾವಡಿಯಲ್ಲಿ ಆ ಮನೆಯ ಹಿರಿಯ ಜೀವದ ಭಾವಚಿತ್ರ ಒಂದನ್ನು ಗೋಡೆಗೆ ಒರಗಿಸಿಟ್ಟು ಅದರ ಪಕ್ಕದಲ್ಲಿ ಸಣ್ಣದಾಗಿ ದೀಪ ಹಚ್ಚಿದ್ದಾರೆ. ಆ ಮನೆಯನ್ನ ನೆಲದಿಂದ ಮೇಲೆದ್ದು ನಿಲ್ಲುವಲ್ಲಿಯವರೆಗೆ ತುಂಬಾ ಪರಿಶ್ರಮ ಪಟ್ಟ ಆ ಮನೆಯ ಯಜಮಾನನ ಪುಣ್ಯತಿಥಿ ಇಂದು . ಸರಿಯಾಗಿ 16 ದಿನಗಳ ಹಿಂದೆ ಅವರಿಗುಂಟಾದ ಎದೆ ನೋವಿಗೊಸ್ಕರ ಆಸ್ಪತ್ರೆ ಸೇರಿಸುವುದಕ್ಕೆ ಮನೆಯಲ್ಲಿ ಬೇಡಿದರೂ ಯಾರು ಗಮನಹರಿಸಲಿಲ್ಲ. ಒಪ್ಪಿಕೊಂಡ ಉದ್ಯಮದಲ್ಲಿ ಸಣ್ಣಮಟ್ಟಿನ ಹಿನ್ನಡೆ ಆದಾಗ ಯಾರು ಜೊತೆಗೆ ನಿಂತವರಿಲ್ಲ, ಊರಿನ ಸಮಸ್ಯೆಗೆ ಇವರು ಧಾವಿಸುತ್ತಿದ್ದರು ಹೊರತು ಇವರ ಸಮಸ್ಯೆ ಕಡೆಗೆ ಊರು ತಿರುಗಿಯೂ ನೋಡಲಿಲ್ಲ. ಹಣದ ಅಡಚಣೆಯಿಂದ ಮಗಳ ಮದುವೆಗೆ ಕಂಡ ಕಂಡಲ್ಲೆಲ್ಲ ಸಾಲ ಮಾಡಿ ಅವಳ ಗಂಡನ ಮನೆಗೆ ಕಳುಹಿಸುವವರೆಗೆ ಇವರಿಗೆ ಸಾಕಾಗಿ ಹೋಗಿತ್ತು. ಆ ಸಮಯದಲ್ಲೂ ಮನೆ ಮಗನಾಗಲಿ ಕುಟುಂಬದವರಾಗಲಿ ಕೈಜೋಡಿಸಿದವರಲ್ಲ. ಎಲ್ಲವನ್ನು ನೋಡುತ್ತಾ ನೋಡುತ್ತಾ ಚಿಂತೆಯಿಂದಲೇ ಎದೆಯೊಳಗಿನ ಪುಟ್ಟ ಪಕ್ಷಿ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿತು. ಆ ಪಕ್ಷಿ ಮಾತು ನಿಲ್ಲಿಸಿದ ಕೂಡಲೇ ಮನೆಯವರ ಕುಟುಂಬದವರ ಊರವರ ಮಾತುಕತೆಗಳು ಜೋರಾಗಲಾರಂಭಿಸಿದವು. ತಾವೇ ಅವರ ಬದುಕನ್ನು ಅದ್ಭುತವಾಗಿ ನಿರ್ಮಿಸಿದ್ದೇವೆ ಅನ್ನೋದನ್ನ ಎಲ್ಲ ಕಡೆಯೂ ಹೇಳೋದಕ್ಕೆ ಪ್ರಾರಂಭ ಮಾಡಿದ್ರು. ಅವರ ಸಾವಿನ ದಿನ ಅವರಿಗಿಷ್ಟವಾದದ್ದೆಲ್ಲವನ್ನ ಬಡಿಸಿಟ್ಟು ಅವರಿಗೆ ಕೈ ಮುಗಿದು ತಾವೇ ಸೇವಿಸಿಕೊಂಡು ಹೊರಟೆ ಹೋಗಿ ಬಿಟ್ರು. ಬದುಕಿರುವಾಗ ನೀರು ಕೊಡದವರು ಸತ್ತ ಮೇಲೆ ಹಾಲು ನೀಡುವುದಕ್ಕೆ ಮುಂದೆ ಬಂದಿದ್ದಾರೆ. ವಿಪರ್ಯಾಸ ಅಂದ್ರೆ ಇದೇ ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ