ಸ್ಟೇಟಸ್ ಕತೆಗಳು (ಭಾಗ ೫೫೮) - ಕತ್ತಲು
ಎಲ್ಲರ ಕತ್ತಲು ಒಂದೇ ತೆರನಾಗಿ ಇರೋದಿಲ್ಲ. ಅವರ ಮರುದಿನದ ಬೆಳಗು ಬೆಳಗಬೇಕಾದರೆ ,ಅಲ್ಲಿ ಹಲವು ಬೆಳಗುಗಳನ್ನ ಉಸಿರಾಡಬೇಕಾದರೆ ಕತ್ತಲೆಯಲ್ಲಿ ಜೀವಿಸಲೇ ಬೇಕಾಗುತ್ತದೆ. ಒಬ್ಬರು ಮಂಚದ ಮೇಲೆ ಆರಾಮಾಗಿ ನಿದ್ರಿಸುತ್ತಿರಬಹುದು, ಇನ್ಯಾರೋ ಮನೆಯ ಕಷ್ಟವನ್ನು ಯೋಚಿಸಿ ಕಣ್ಣೀರಿಡುತ್ತಿರಬಹುದು, ಪೆಟ್ರೋಲ್ ಬಂಕ್ ಅಲ್ಲಿ ಪೆಟ್ರೋಲ್ ಹಾಕಬಹುದು, ಚುರುಮುರಿ ಅಂಗಡಿ ಇಡಬಹುದು, ವಾಚ್ಮನ್ ಆಗಿರಬಹುದು, ಗಾಡಿ ಓಡಿಸಬಹುದು, ದೊಡ್ಡ ಕೆಲಸ ಮಾಡ್ತಾ ಇರಬಹುದು ಸಣ್ಣ ಕೆಲಸವಾದರೂ ಸರಿ, ಅಭಿನಯಿಸುತ್ತಿರಬಹುದು, ಭವಿಷ್ಯದ ಬೆಳಗಿಗೆ ರಾತ್ರಿ ಓದುತ್ತಿರಬಹುದು, ಪ್ರತಿಯೊಬ್ಬರಿಗೂ ಅವರ ಬೆಳಗು ತುಂಬಾ ಮುಖ್ಯ. ಆ ಬೆಳಕಿನಲ್ಲಿ ಎಲ್ಲರ ತರಹ ಬದುಕಬೇಕಾದ ಆಸೆಗೋಸ್ಕರ ಹಲವು ರಾತ್ರಿಗಳನ್ನ ಕಳೆದುಕೊಂಡಿರುತ್ತಾರೆ. ಬೆಳಕು ಎಲ್ಲರ ಜೀವನದಲ್ಲಿ ಬರುತ್ತದೆ. ಬೆಳಕಿನಲ್ಲಿ ಹೆಚ್ಚಿನವರ ಜೀವನ ಒಂದೇ ತೆರನಾಗಿರುತ್ತದೆ ಆದರೆ ಕತ್ತಲೆ ಪ್ರತಿಯೊಂದು ವಿಭಿನ್ನವಾಗಿ ಇರೋದು. ಕತ್ತಲಲ್ಲಿ ಮಾತ್ರ ನಾವು ನಾವಾಗಿರುತ್ತೇವೆ. ಅಲ್ಲಿ ಮುಖವಾಡವಿಲ್ಲ, ಕಪಟತನವಿಲ್ಲ. ಪ್ರಾಮಾಣಿಕವಾಗಿ ಮನಸ್ಸಿಗೆ ಅದೇ ಆಲೋಚನೆಯನ್ನು ಸೃಷ್ಟಿಸಿಕೊಂಡು ಬದುಕ್ತಾ ಇರುತ್ತೇವೆ. ಹಾಗಾಗಿ ಕತ್ತಲನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ನಾನು ಕೂಡ. ಅಲ್ಲಿ ನಾನು ನಾನಾಗಿರಬಹುದು ಅನ್ನುವ ಕಾರಣಕ್ಕೆ. ಇಂದು ಒಂದಷ್ಟು ಕತ್ತಲಲ್ಲಿ ಮರುದಿನದ ಬೆಳಕಿಗೆ ಬದುಕೋರನ್ನ ನೋಡಿ ಬಂದೆ ಹಲವು ಜನರಿಗೆ ಬೆಳಕಲ್ಲಿ ಅದ್ಭುತವಾಗಿ ಬದುಕುವುದಕ್ಕೆ ಆಸೆ ಇದೆ, ಆದರೆ ಕತ್ತಲು ಸಾಕಾಗ್ತಿಲ್ಲ. ಎಲ್ಲರಿಗೂ ಬೆಳಕಲ್ಲಿ ನೆಮ್ಮದಿಯಾಗಿ ಬದುಕುವ ದಿನಗಳು ಯಾವಾಗ ಬರುತ್ತೋ ನಾನು ಅದೇ ದಿನಕ್ಕೋಸ್ಕರ ಕಾಯ್ತಾ ಇದ್ದೇನೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ