ಸ್ಟೇಟಸ್ ಕತೆಗಳು (ಭಾಗ ೫೬೦) - ಯೋಚನೆ
ಅವನು ಅರ್ಥವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾನೆ. ಕುಳಿತ ಜಾಗ ಒಂದಷ್ಟು ನೆರಳಿರುವ ಕಾರಣ ತಲೆಯ ಬಿಸಿ ಒಂದು ಚೂರು ಕಡಿಮೆಯಾಗಿದೆ. ಆದರೆ ಒಳಗಿನ ಬಿಸಿ ಹಾಗೆ ಉಳಿದುಬಿಟ್ಟಿದೆ. ನಾನು ಅವನನ್ನ ಯಾವತ್ತೂ ಹಾಗೆ ನೋಡಿದವನಲ್ಲ ಇವತ್ತು ಮಾತನಾಡಲೇಬೇಕು ಅಂತ ಅನ್ನಿಸಿ ಅವನ ಬಳಿ ಕುಳಿತು ಮಾತನಾಡಂಬಿಸಿದೆ ಅವನು ಹೇಳಿದ್ದಷ್ಟು "ಸಾರ್ ಬದುಕು ನಾವಂದುಕೊಂಡ ಹಾಗೆ ಸಾಗ್ತಾ ಇರುತ್ತದೆ, ಒಂದಷ್ಟು ಕಷ್ಟ ಬಂದಾಗ ಅದನ್ನು ಪರಿಹರಿಸುವುದಕ್ಕೆ ನಮ್ಮ ಬದುಕಿನ ರೀತಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಮಾಡ್ತಿರೋ ಕೆಲಸದಲ್ಲಿ ಸಂಭಾವನೆ ಹೆಚ್ಚಾಗುತ್ತದೆ. ಇನ್ನಾದರೂ ಉಳಿತಾಯ ಆರಂಭಿಸಬಹುದು ಅಂತ ಯೋಚನೆ ಮಾಡಿದಾಗ ಇನ್ನೊಂದಷ್ಟು ಹೊಸ ಖರ್ಚುಗಳು ಎಲ್ಲಿಂದಲೋ ಹುಟ್ಟಿಕೊಳ್ಳುತ್ತವೆ. ಇಷ್ಟರವರೆಗೂ ಎದುರಾಗದಿದ್ದಂತಹ ಸಮಸ್ಯೆಗಳು ಉದ್ಭವಿಸಿಬಿಡುತ್ತವೆ. ಕಷ್ಟಗಳು ಇನ್ನೊಂದಷ್ಟು ಗಂಟು ಕಟ್ಟಿಕೊಂಡು ಓಡಿ ಬರ್ತವೆ. ಇವೆಲ್ಲವನ್ನ ನಿಭಾಯಿಸುತ್ತಾನೆ ಮತ್ತೆ ಹಳೆಯದ್ದೇ ಬದುಕಲ್ವಾ ಅಂತ ಅನ್ನಿಸೋಕೆ ಆರಂಭವಾಗುತ್ತದೆ. ಇದು ಬದಲಾಗೋದು ಹೇಗೆ ಸರ್? ಅರ್ಥ ಆಗ್ತಾ ಇಲ್ಲ" "ನೋಡು ನಾವು ಬದುಕಬೇಕು. ಅದು ಮಾತ್ರ ಸತ್ಯ. ಪರಿಸ್ಥಿತಿಗಳು ನಮ್ಮ ಕೈಯಲ್ಲಿ ಇರುವುದಿಲ್ಲ .ಅದಕ್ಕೆ ಕೆಲವೊಂದನ್ನು ನಿಭಾಯಿಸಬೇಕಾಗುತ್ತದೆ. ಒಂದಷ್ಟು ಸಮಯದವರೆಗೆ ಒದ್ದಾಟ ತಪ್ಪಿದ್ದಲ್ಲ. ಯೋಚಿಸಿ ಕೂತಾಗ ಪರಿಹಾರ ದೊರಕುವುದಿಲ್ಲ. ಪ್ರತಿದಿನವೂ ಬದುಕುತ್ತಾ ಹೋಗಬೇಕು. ಯಾವತ್ತೂ ಒಂದು ದಿನ ಪರಿಹಾರ ಸಿಗಬಹುದು .ಆ ಕಾರಣಕ್ಕೆ ಇವತ್ತಿನ ಬದುಕನ್ನ ವ್ಯರ್ಥ ಮಾಡಿಕೊಳ್ಳುವುದು ತಪ್ಪು. ಎದ್ದು ಕೆಲಸಕ್ಕೆ ನಡೀ. ಒಂದಲ್ಲ ಒಂದು ದಿನ ಬದುಕು ಬದಲಾಗುತ್ತದೆ. ಕಾಣದ ನಾಳೆ ಇರಬಹುದು ಅಚ್ಚಾಗದ ನಾಡಿದ್ದು ಇರಬಹುದು. ಒಟ್ಟು ಖಾಲಿ ಹಾಳೆಗಳು ಮುಂದಿವೆ. ತುಂಬಿಸಬೇಕಾದ ಜವಾಬ್ದಾರಿ ನಿನ್ನದು. ಎಚ್ಚರದಿಂದ ಹೆಜ್ಜೆ ಇಡಬೇಕು. ಕುಳಿತು ಚಿಂತಿಸುವುದರಿಂದ ಮುಂದಿನ ಜೀವನದ ಪುಟ ತುಂಬೋದಿಲ್ಲ. ನೆನಪಿರಲಿ" ಅವನು ಎದ್ದು ಹೊರಟುಬಿಟ್ಟ ಅರ್ಥವಾದದ್ದಕ್ಕೆ ಎದ್ದು ಹೋದನೋ, ಕಿರಿಕಿರಿಯಾದದ್ದಕ್ಕೆ ಎದ್ದು ಹೋದ್ನೋ ಗೊತ್ತಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ