ಸ್ಟೇಟಸ್ ಕತೆಗಳು (ಭಾಗ ೫೬೩) - ಶವಾಗಾರ
ಮಸಣದೊಳಗೆ ಮೆರವಣಿಗೆ ನಡೆಸುವ ದೇಹವೊಂದು ಶವಗಾರದ ಒಳಕ್ಕೆ ಪ್ರವೇಶವಾಯಿತು. ಅದರ ವಾರೀಸುದಾರರು ದೂರದಲ್ಲಿ ನಿಂತಿದ್ದಾರೆ. ನಿನ್ನೆಯವರೆಗೂ ಜೊತೆಯಲ್ಲಿ ಓಡಾಡಿದವ ಒಂದಷ್ಟು ಕನಸುಗಳನ್ನು ತುಂಬಿದವ ಸ್ಪೂರ್ತಿ ನೀಡಿದವ ಇಂದು ಬಿಳಿ ಬಟ್ಟೆಯನ್ನು ಮೈಗೆ ಸುತ್ತಿಕೊಂಡು ನಿಸ್ತೇಜನಾಗಿ ಮಲಗಿದ್ದಾನೆ. ಆ ಕೋಣೆಯಲ್ಲಿ ತಿರುಗುತ್ತಿರುವ ಫ್ಯಾನ್ ಒಂದು ಗಾಳಿಯನ್ನು ನೀಡುತ್ತಿದ್ದರು ಆತನ ದೇಹದೊಳಗೆ ಯಾವುದೇ ಗಾಳಿಯು ಚಲಿಸುತ್ತಲೇ ಇಲ್ಲ. ಆತನ ಬದುಕಿನಲ್ಲಿ ಹಣದ ತೊಂದರೆ ಇರಲಿಲ್ಲ, ದುಶ್ಚಟವಿರಲಿಲ್ಲ, ದುರಭ್ಯಾಸವಿರಲಿಲ್ಲ, ಆದರೂ ಸಾವು ಬಿಡಲೇ ಇಲ್ಲ. ಕೆಲವೇ ಕ್ಷಣಗಳಲ್ಲಿ ಆ ಶವಾಗಾರದ ಕೋಣೆಯೊಳಗೆ ಇನ್ನೊಂದಷ್ಟು ಹೆಣಗಳು ಬಂದು ಬಂದು ನಿಂತು ಬಿಟ್ಟವು. ಅಲ್ಲಿ ಜೊತೆಯಾದ ಯಾವುದೇ ಹೆಣಗಳು ಸಂಬಂಧಿಕರಲ್ಲ ಪರಿಚಯಸ್ತರಲ್ಲ ಜಾತಿ ಗೊತ್ತಿಲ್ಲ ಆದರೂ ಎಲ್ಲವೂ ಹೆಣಗಳಷ್ಟೇ. ಹೆಸರಿಲ್ಲದ ಕೊರಡುಗಳು. ಬೆಂಕಿಯಲ್ಲಿ ಬೇಯುವ ತರಕಾರಿಗಾದರೂ ಒಂದಷ್ಟು ಮೌಲ್ಯವಿದೆ ನಾವೆಷ್ಟೇ ಬೆಂದು ಸುಟ್ಟು ಬೂದಿಯಾದರು ಕಣ್ಣೀರು ಹಾಕುತ್ತಾರೇ ವಿನಃ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಶವಾಗಾರದ ಒಳಗೆ ಮಲಗಿದವನ ಎರಡು ಪುಟ್ಟ ಮಕ್ಕಳು ಆಸ್ಪತ್ರೆಯ ವರಂಡದಲ್ಲಿ ಆಟ ಆಡುತ್ತಿದ್ದಾರೆ. ಬದುಕಿನ ದೊಡ್ಡ ಅವಕಾಶದಲ್ಲಿ ತಂದೆ ಎಂಬ ಚೈತನ್ಯ ಒಂದು ದೂರವಾಗಿದೆ ಅನ್ನುವಂತಹ ಸಣ್ಣ ಯೋಚನೆಯೂ ಆ ಮನಸ್ಸುಗಳಲ್ಲಿ ಇಲ್ಲ. ಒಳಗೆ ಮಲಗಿದವನ 90 ವರ್ಷದ ತಂದೆ ಕುರ್ಚಿ ಮೇಲೆ ಕುಳಿತು ಆಕಾಶವನ್ನು ದಿಟ್ಟಿಸುತ್ತಿದ್ದಾರೆ.ಅವರಿಗೆ ಬದುಕುವ ಆಸೆ ಇಲ್ಲದಿದ್ದರೂ ಉಸಿರನ್ನು ತೆಗೆದುಕೊಳ್ಳುವುದಕ್ಕೆ ದೇವರು ಸಮಯ ನಿಗದಿ ಮಾಡಿಲ್ಲ. ಎಲ್ಲವೂ ಅಂದುಕೊಂಡಂತೆ ಸಾಗುವುದಿಲ್ಲ, ವಿಚಿತ್ರಗಳೇ ನಡೆಯುತ್ತಿರುತ್ತದೆ. ಅನುಭವಿಸಬೇಕು ಹೊರಡಬೇಕು ಇದಿಷ್ಟು ಬಿಟ್ಟು ಬೇರೇನು ನಮ್ಮ ಕೈಯಲ್ಲಿಲ್ಲ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ