ಸ್ಟೇಟಸ್ ಕತೆಗಳು (ಭಾಗ ೫೬೪) - ಕಲಾವಿದ
ಬದುಕು ನಮ್ಮನ್ನ ಕಾಯಿಸುತ್ತದೆ. ಬೇಕಾಗಿರೋದು ದೊರಕುವವರೆಗೂ ಕಾಯಲೇ ಬೇಕು. ಹಾಗಂತ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸು ಮನಸೂರೆಗೊಂಡು, ಅವರ ಚಿಂತೆ ದುಗುಡಗಳನ್ನ ಮರೆಮಾಚಿ ಅವರು ನಕ್ಕು ಮನೆಯ ಕಡೆಗೆ ಹೊಸ ಉತ್ಸಾಹದಿಂದ ತೆರಳುವಂತೆ ಮಾಡುವ ಕಲಾವಿದರು ಕೂಡಾ ಕಾಯಬೇಕಾದ್ದು ಎಷ್ಟು ಸರಿ. ದೊಡ್ಡದೂರಿನ ದೊಡ್ಡ ಹೆಸರಿನ ದೊಡ್ಡ ವ್ಯಕ್ತಿಯೊಬ್ಬರು ವೇದಿಕೆಗೆ ಬರುತ್ತಾರೆ ಅಂತ ಅಂದ್ರೆ ಅವರ ತುರ್ತು ಪರಿಸ್ಥಿತಿಗೋಸ್ಕರ ವೇಗದಲ್ಲಿ ಕಾರ್ಯಕ್ರಮಗಳನ್ನು ಮುಗಿಸಿ ಅವರನ್ನ ಕಳುಹಿಸಿಕೊಡುತ್ತಾರೆ, ಯಾಕೆಂದರೆ ಅವರು ಸಮಾಜಮುಖಿ ಕೆಲಸ ಮಾಡುವವರು,ಅವರಿಂದ ತುಂಬಾ ಕೆಲಸ ಆಗೋದಕ್ಕಿದೆ. ಈ ಯೋಚನೆ ನಮ್ಮಲ್ಲಿರುವಾಗ ವೇದಿಕೆಯ ಮೇಲೆ ನಿಂತು ಬೆವರು ಹರಿಸಿ ನಿರರ್ಗಳವಾಗಿ ಮಾತನಾಡಿಕೊಂಡು, ನೃತ್ಯ ಮಾಡಿಕೊಂಡು ಮನರಂಜನೆ ನೀಡುವ ಕಲಾವಿದನಿದ್ದಾನಲ್ಲ ಆತನಿಗೂ ರಾತ್ರಿಯ ಕತ್ತಲು ಮುಗಿದು ಬೆಳಗಿನ ಬೆಳಕು ಮೂಡಿದ ನಂತರ ಅವನದೇ ಆದ ಬದುಕಿದೆ ಅಲ್ವಾ? ಊರಲ್ಲದ ಊರಲ್ಲಿ ಸಮಯವಲ್ಲದ ಕಾಲದಲಿ ವೇದಿಕೆಯ ಮೇಲೇರಲು ಮುಖಕ್ಕೆ ಒಂದಿಷ್ಟು ಬಣ್ಣ ಹಚ್ಚಿ ಕುಳಿತು ಕಾಯುತ್ತಾನೆ, ಆತನಿಗೆ ಹಸಿವೆ ಇದೆ ಬದುಕಿನದ್ದು. ಕಲಾವಿದನಾಗೋದು ಅಷ್ಟು ಸುಲಭವಾದ ಕೆಲಸವಲ್ಲ. ಹಲವು ದಿನಗಳ ನಿದ್ದೆ ಬಿಟ್ಟು, ದೇಹದಲ್ಲೇನೇ ನಿತ್ರಾಣವಿದ್ದರೂ ಮತ್ತೊಂದಿಷ್ಟು ಚೈತನ್ಯ ತುಂಬಿ ವೇದಿಕೆಯಲ್ಲಿ ಹೊಸ ಹೊಸ ಪಾತ್ರವಾಗಿ ಬದುಕುತ್ತಾನೆ. ಆತ ಜೀವನದಲ್ಲಿ ಹಲವನ್ನ ಕಳೆದುಕೊಂಡಿರುತ್ತಾನೆ. ಹೀಗಿದ್ರೂ ಪರಿಸ್ಥಿತಿ ಬದಲಾಗೋದಿಲ್ಲ ಅಲ್ವಾ? ಅಂತ ಯೋಚಿಡುತ್ತಾ ರಮೇಶ ಮುಖಕ್ಕೆ ಬಣ್ಣ ಬಳಿದು ವೇದಿಕೆ ಏರಲು ಕಾಯುತ್ತಿದ್ದಾನೆ, ಕಾಯುತ್ತಲೇ ಇದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ