ಸ್ಟೇಟಸ್ ಕತೆಗಳು (ಭಾಗ ೫೭೧) - ಮುನಿಸು

ಸ್ಟೇಟಸ್ ಕತೆಗಳು (ಭಾಗ ೫೭೧) - ಮುನಿಸು

"ಮುನಿಸು ತರವೇ ಮುಗುದೇ" ರೇಡಿಯೋದಲ್ಲಿ ಈ ಹಾಡು ತುಂಬಾ ಚೆನ್ನಾಗಿ ಕೇಳಿಸ್ತಾ ಇದೆ. ಸಿಕ್ಕಸಿಕ್ಕಲ್ಲಿ ಕಂಡ ಕಂಡಲ್ಲಿ ಎಲ್ಲಾ ಕಡೆಗೂ ಇದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ... ಕಾರಣ ಏನಿರಬಹುದು? ನೆನಪಿನ ಮೂಟೆಯನ್ನು ಎತ್ತಿ ಅಲ್ಲಾಡಿಸಿ ಒಳಗಿಣುಕಿದಾಗ ಕಂಡದ್ದು ಆ ಒಂದು ದೃಶ್ಯ, ಮುಖಕ್ಕೆ ಬಣ್ಣ ಹಚ್ಚಿಕೊಳ್ಳಬೇಕು ಕನ್ನಡಿಯಲ್ಲಿ ಮುಖವನ್ನ ಗಮನಿಸಿಕೊಳ್ಳಬೇಕು, ವೇದಿಕೆಯಲ್ಲಿ ನಮ್ಮ ಮುಖವನ್ನು ಪ್ರೇಕ್ಷಕರು ಮಂತ್ರಮುಗ್ದರಾಗಿ ನೋಡುತ್ತಾರೆ. ಇದೊಂದು ಭಕ್ತಿ ಪೂರಕವಾದ ಎಲ್ಲರೂ ಪ್ರೀತಿಸುವ ಪ್ರೀತಿಯ ಜಾಗ. ಮನಸುಗಳ ನಡುವೆ ಸಣ್ಣದೊಂದು ಸೇತುವೆ ನಿರ್ಮಾಣ ಆಗಿದೆ. ಇಷ್ಟರವರೆಗೂ ಆ ಎಲ್ಲ ಮನಸ್ಸುಗಳು ಜೊತೆಯಾಗಿ ಹೆಜ್ಜೆ ಇಟ್ಟದ್ದು... ಸೇತುವೆ ನಿರ್ಮಾಣ ಆಗಬೇಕು ಅಂತ ಅಂದ್ರೆ  ಮಧ್ಯದಲ್ಲೊಂದು ನದಿ ದಾಟಲೆ ಬೇಕು. ಆ ಮನಸುಗಳ ನಡುವೆ ದಾಟಿದ ನದಿ ಯಾವುದು ಅಂತ ಗೊತ್ತಿಲ್ಲ. ದಿನವೂ ಜೊತೆಗೆ ಒಂದೇ ತಟ್ಟೆಯಲ್ಲಿ ಊಟ ಮಾಡ್ತಾ ಇದ್ದವರು ಉಪವಾಸ ನಿಂತುಬಿಟ್ಟಿದ್ದಾರೆ. ಕೈ ಹಿಡಿದು ಜೊತೆಯಾದವರು ಮುಖಸ್ತುತಿಗೆ ಆತ್ಮೀಯರಂತೆ ಬಿಂಬಿಸುತ್ತಾರೆ. ವೇದಿಕೆಯಲ್ಲಿ ಅದ್ಭುತ ಗೆಳೆಯರಾಗಿದ್ದವರು ವೇದಿಕೆಯ ಹೊರಗಡೆ ಮುಖ ತಿರುಗಿಸಿ ಮುನ್ನಡೆಯುತ್ತಾರೆ. ಬದುಕು ಎಷ್ಟು ದಿನ. ನೋಡುಗರಿಗೆ ನೋವೆನಿಸುವುದರ ಜೊತೆಗೆ ಬದುಕುತ್ತಿರುವವರಿಗೆ ನೋವೆನಿಸುವಂತಹ ದೃಶ್ಯ, ಅವರಿಗೆ ಯಾಕೆ ನೋವು ಕಾಣಿಸುತ್ತಿಲ್ಲ?. ಮುನಸಿನ ಜ್ವಾಲೆಯಲ್ಲಿ ಬೆಂದು ಹೋಗುವುದು ಯಾಕೆ? ಬೆಂದು ಬೆಂದು ಕರಕಲಾಗಿ ತಾವು ಸುಟ್ಟು ಸುತ್ತಲಿದ್ದವರನ್ನು ಸುಡುವುದಕ್ಕಿಂತ ಅದನ್ನ ನಂದಾದೀಪವಾಗಿಸಿ ಒಂದಷ್ಟು ಬೆಳಕು ನೀಡುವ ಕೆಲಸವಾಗಲಿ... ಆ ಕಾರಣಕ್ಕೆ ಆ ಹಾಡು ಕೇಳಿಸುವಂತಾದದ್ದು. ನಾಳೆಯಿಂದಲಾದರೂ ಆ ಹಾಡು ನಿಂತು ಹೊಸತೊಂದು ಹಾಡು ಮೂಡಲಿ.ಈ ಕಥೆ ಎಲ್ಲರದು, ಆದರೂ ತಲುಪಬೇಕಾದ ಮನಸ್ಸುಗಳಿಗೆ ತಲುಪಿದರೆ ...ಬರೆದದ್ದಕ್ಕೂ ಸಾರ್ಥಕ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ