ಸ್ಟೇಟಸ್ ಕತೆಗಳು (ಭಾಗ ೫೭೩) - ಕೂಗು

ಸ್ಟೇಟಸ್ ಕತೆಗಳು (ಭಾಗ ೫೭೩) - ಕೂಗು

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ  ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ ಹತ್ತಿರ ನೋಡೋದಕ್ಕೆ ಏನು ಇಲ್ವಾ? ನಾನು ಅದ್ಭುತವೇ ಅಲ್ವಾ? ನನ್ನನ್ಯಾಕೆ ನೀವ್ಯಾರು ಅಷ್ಟು ಸರಿಯಾಗಿ ಗಮನಿಸಲೇ ಇಲ್ಲ. ಹಲವಾರು ಘಟನೆಗಳು ಕಲಾ ಕೃತಿಗಳು ನಿಮ್ಮ ಗಮನಕ್ಕೆ ಬರದೇ ಇದ್ದುಬಿಟ್ಟಿದ್ದಾವೆ. ನಿಮಗೆ ಯಾವತ್ತೂ ನಾವು ಪ್ರೇಕ್ಷಣೀಯವಾದವರು ಅಂತ ಅನಿಸಿಲೇ ಇಲ್ಲ. ಇಲ್ಲಿ ಗಮನಿಸಬೇಕಾದ್ದು ನಿಮ್ಮ ದೃಷ್ಟಿ. ನೀವು ನಮ್ಮನ್ನು ನೋಡುತ್ತಿರುವ ಸಮಯ, ಸಂದರ್ಭ ಮತ್ತು ನಮ್ಮಿಂದ ಏನು ಮತ್ತು ಯಾವುದನ್ನ ಬಯಸ್ತಾ ಇದ್ದೀರಿ, ನೀವು ಇದ್ಯಾವುದು ಅಲ್ಲದೆ ಇರೋದನ್ನ ಗಮನಿಸಿದಾಗ ನನ್ನಲ್ಲಿರುವಂತಹ ಪ್ರೇಕ್ಷಣೀಯವಾದದ್ದು ನಿಮಗೆ ಕಾಣುವುದಿಲ್ಲ. ನನ್ನಲ್ಲೂ ಹುಡುಕಿ ನಿಮ್ಮ ದೃಷ್ಟಿ ಬದಲಾಯಿಸಿಕೊಳ್ಳಿ. ಪ್ರತಿಯೊಂದು ಜಾಗವು ಪ್ರೇಕ್ಷಣೀಯ ಸ್ಥಳವೇ. ಪ್ರತಿಯೊಂದು ವಸ್ತುಗಳು ಶಿಲ್ಪವು, ಮರ ಗಿಡ, ಹರಿಯುತ್ತಿರುವ ಹಳ್ಳ ನೀರಿನ ಜರಿ ಎಲ್ಲವೂ ಪ್ರೇಕ್ಷಣೀಯವಾದದ್ದೆ. ನಾವು ಅದನ್ನು ಯಾವ ದೃಷ್ಟಿಯಿಂದ ನೋಡಬೇಕು ಯಾವ ಕಾರಣಕ್ಕಾಗಿ ನೋಡಬೇಕು ಅನ್ನುವಂತ ಒಂದು ಆಲೋಚನೆ ನಿಮ್ಮೊಳಗೆ ಬಂದ್ರೆ ನಾನು ಕೂಡ ನಿಮಗೆ ಪ್ರೇಕ್ಷಣೀಯ ಸ್ಥಳವಾಗಿ ಕಾಣುತ್ತೇನೆ." ಹೀಗಂತ ಬೋರು ಗುಡ್ಡದ ಮೇಲೆ ನಿಂತ ಆ ಒಂದು ನೀರಿನ ಟ್ಯಾಂಕ್ ಜೋರಿನಲ್ಲಿ ಬೊಬ್ಬೆ ಹೊಡೆಯುತ್ತಾ ಇತ್ತು. ಆದರೆ ಆ ಬೊಬ್ಬೆ ಬೇರೆ ಬೇರೆ ಅದ್ಭುತವಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸುಗಳಿಗೆ ಹೇಗೆ ಕೇಳುವುದಕ್ಕೆ ಸಾಧ್ಯ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ