ಸ್ಟೇಟಸ್ ಕತೆಗಳು (ಭಾಗ ೫೭೮) - ಬದ್ಧತೆ
"ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ ವಯಸ್ಸು ಅವಳದು. ಅಷ್ಟೇನೂ ಅದ್ಭುತ ಯೋಚನೆಗಳು ಇಲ್ಲದ ಪುಟ್ಟ ಹುಡುಗಿ ಎರಡನೇ ತರಗತಿಯನ್ನು ಪೂರ್ಣಗೊಳಿಸಿದ್ದಾಳಷ್ಟೇ. ಜ್ವರ ಹೆಚ್ಚಾಗಿ ಬೆಳಗ್ಗೆ ತಿಂದದ್ದು ವಾಂತಿಯಾಯಿತು. ನಿತ್ರಾಣ ದೇಹವನ್ನು ಆವರಿಸ್ತು. ಆದರೂ ಆಕೆ ಮುಖಕ್ಕೆ ಬಣ್ಣ ಹಚ್ಚಿದ್ದಾಳೆ. ವೇದಿಕೆಯಲ್ಲಿ ತನ್ನ ಅಭಿನಯವನ್ನು ತೋರಿಸಲೇಬೇಕು, ಅದನ್ನ ಮಾಡಿದರೆ ಮಾತ್ರ ಆ ದಿನದ ನಾಟಕ ಪೂರ್ತಿಗೊಳ್ಳುತ್ತೆ. ಅದ್ಭುತವಾದ ನಾಟಕದ ಇನ್ನೊಂದು ಪ್ರದರ್ಶನಕ್ಕೆ ಅವಕಾಶ ಸಿಗುತ್ತೆ. ದೇಹ ನಡುಗ್ತಾ ಇದ್ರು ಕೂಡ ಜೊತೆಗೆ ನಿಂತ ತಂದೆ ತಾಯಿ, ಪ್ರತಿದಿನ ಪ್ರೀತಿಸೋ ಎಲ್ಲಾ ಕಲಾವಿದರ ಜೊತೆ ಸೇರಿ ನಾಟಕವನ್ನು ಗೆಲ್ಲಿಸಿ ಕೊಟ್ಟಿದ್ದಾಳೆ. ಮತ್ತೆ ಜ್ವರದ ನೆನಪಾಗಿದೆ ಅಂತ ಕಾಣುತ್ತೆ ವಿಶ್ರಾಂತಿಯನ್ನು ಬಯಸಿದ್ದಾಳೆ." ನೀನು ಆಗದಿಂದ ಕೇಳುತ್ತಾ ಇದ್ಯಲ್ಲ ಬದ್ಧತೆ ಅಂದ್ರೆ ಏನು ಅಂತ ನಿನಗೆ ಕೊಟ್ಟಿರುವ ಒಂದು ಕೆಲಸವನ್ನು ಸಮರ್ಪಕವಾಗಿ ಮಾಡೋದಕ್ಕೆ ತಲೆ ನೋವು ಅನ್ನುವ ಕಾರಣವನ್ನು ಕಳೆದೆರಡು ದಿನಗಳಿಂದ ನೀಡುತ್ತಾ ಬರ್ತಾ ಇದ್ದೀಯಾ ?ಅಷ್ಟು ಸಣ್ಣ ಕೆಲಸವನ್ನೇ ಮಾಡಕ್ಕಾಗದೇ ಇರುವಂತಹ ನಿನಗೆ ಬದ್ಧತೆಯ ಪರಿಚಯ ಆಗಬೇಕು ಅನ್ನೋದಕ್ಕೆ ಈ ಹುಡುಗಿಯ ಕಥೆ ಹೇಳಿದೆ. ಅವಳು ವಿಶ್ರಾಂತಿಯನ್ನು ಬಯಸಬಹುದಿತ್ತು. ಎಲ್ಲರೂ ಕೂಡ ಅದನ್ನೇ ಹೇಳಿದರು. ನಾಟಕ ಮಾಡಬೇಕು ಅನ್ನುವ ಭದ್ರತೆ ಎರಡನೇ ತರಗತಿಯ ಹುಡುಗಿಯ ಮನಸ್ಸಿನಲ್ಲಿದೆ ಅಂತಾದಾಗ ನೀನು ಮಾಡೋ ಕೆಲಸದ ಬಗ್ಗೆ ಯೋಚನೆ ಯಾಕಿಲ್ಲ. ಕಲಿಯೋದು ತುಂಬಾ ಇದೆ ಕಲ್ಸೋರು ತುಂಬಾ ಜನ ಇರ್ತಾರೆ. ಆದ್ರೆ ನಾವಾಗಿಯೇ ನೋಡಿ ಕಲಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜೀವನದಲ್ಲಿ ಬದ್ಧತೆ ಇದ್ದಾಗ ಮಾತ್ರ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳಬಹುದು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ