ಸ್ಟೇಟಸ್ ಕತೆಗಳು (ಭಾಗ ೫೭) - ಸುಲಿದ ಮೂಸುಂಬಿ
ಗಾಡಿಯ ಚಕ್ರಗಳು ಅಲ್ಲೇ ನಿಂತಿದೆ. ಮಣ್ಣಿನೊಂದಿಗೆ ಬೆರೆತು ತುಕ್ಕು ಹಿಡಿದಿದೆ. ಕಾಲ ಚಲಿಸಿದರು ಗಾಡಿಯ ಚಕ್ರ ನಿಂತಲ್ಲಿಂದ ಕದಲಲ್ಲಿಲ್ಲ. ಬದಲಾವಣೆ ಕಂಡಿಲ್ಲ. ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಾ ಶಿಥಿಲವಾಗಿದೆ, ಚಕ್ರವನ್ನು ಹೊತ್ತ ಗಾಡಿಯ ಮಾಲಿಕನಾದ ಅಜ್ಜನ ಹಾಗೆ. ಮುಂಜಾನೆ ಬಂದು ನಿಂತರೆ ಸಂಜೆಯವರೆಗೂ ನಿಂತೇ ಕೆಲಸ. ಕುಳಿತು ವಿಶ್ರಮಿಸುವುದಿಲ್ಲ.
ಕುಳಿತರೆ ಬರುವ ಗಿರಾಕಿಗಳು ದೂರದಿಂದಲೇ ಹೋಗಿ ಬಿಡುತ್ತಾರೆ ಎನ್ನುವ ಭಯ. ಮುಸುಂಬಿಯ ಸಿಪ್ಪೆಯನ್ನು ಒಂದೊಂದಾಗಿ ಸುಲಿದ ಹಾಗೆ ಜೀವನದ ಹಲವು ಕತೆಗಳು ಮನಃ ಪಟಲದಲ್ಲಿ ಮೂಡಿ ಮರೆಯಾಗುತ್ತದೆ. ವಿದ್ಯೆಯಿಲ್ಲದ ಜೀವನ, ಪ್ರೀತಿಸಿದ ಮಡದಿ, ತಾನು ಪ್ರೀತಿಸಿದ- ತನ್ನ ಪ್ರೀತಿಸದ ಮಕ್ಕಳು, ಎಲ್ಲವನ್ನು ಮಾರಿ ದಾರಿತಪ್ಪಿ ಊರು ಬಿಟ್ಟವರು, ಸಣ್ಣ ಜಗಳಗಳು, ತಪ್ಪಿಲ್ಲದಿದ್ದರೂ ತಲೆತಗ್ಗಿಸಿದ ಘಟನೆಗಳು, ಒಂದೊಂದೇ ಘಟನೆಗಳು ಮುಂದುವರಿದ ಹಾಗೆ ಮುಸುಂಬಿಯ ಸಿಪ್ಪೆ ಸುಲಿದಾಗಿರುತ್ತದೆ. ಇವನ ಬದುಕಿನಂತೆ ರಸವನ್ನು ಹೀರಿ ಹೊರಟು ಹೋಗಿ ಜಲ್ಲೆಯೆಂದು ಉಳಿಯುತ್ತದೆ. ಜಲ್ಲೆಯನ್ನು ಬದಿಗೆ ಸರಿಸಿ ಗಾಡಿಯ ಪಕ್ಕದಲ್ಲಿ ನಿಂತು ಮತ್ತೆ ಕಾಯುತ್ತಾನೆ. ಮತ್ತೊಬ್ಬ ಗಿರಾಕಿಗೆ. ಯಾರಲ್ಲಿಯೂ ದೂರಿಲ್ಲ ,ಯಾರನ್ನು ದೂಷಿಸಿಲ್ಲ, ದಿನದ ಬದುಕಿಗೆ ಸಂಪಾದಿಸುತ್ತಾನೆ .ಹೊಟ್ಟೆಗೆ ಏನನ್ನಾದರೂ ಇಳಿಸುತ್ತಾನೆ. ನಿದ್ರಿಸುತ್ತಾನೆ .ಹೊಸ ಕನಸುಗಳಿಲ್ಲ ಹಳೆಯ ನೆನಪುಗಳಷ್ಟೇ.
ಮರುದಿನ ಸೂರ್ಯೋದಯದದೊಂದಿಗೆ ಎಚ್ಚರವಾಗುತ್ತದೆ. ನೆನಪೆಂಬ ಮೂಸುಂಬಿ ಸಿಪ್ಪೆಯನ್ನು ಮತ್ತೆ ಸುಲಿಯುತ್ತಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ